ನವದೆಹಲಿ : ಭಾರತದ ಆರ್ಥಿಕತೆ ಇನ್ನು ಐದು ವರ್ಷಗಳಲ್ಲಿ 20.7 ಲಕ್ಷ ಕೋಟಿ ಡಾಲರ್ ತಲುಪಲಿದೆ. 2038ರ ಹೊತ್ತಿಗೆ 34.2 ಲಕ್ಷ ಕೋಟಿ ಡಾಲರ್ ಮುಟ್ಟಲಿದ್ದು, ಚೀನಾ ಹಿಂದಿಕ್ಕಿ ಜಗತ್ತಿನ ಎರಡನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಇವೈ ಎಕಾನಮಿ ವಾಚ್‌ನ ವರದಿ ತಿಳಿಸಿದೆ.
ಭಾರತದ ವಾರ್ಷಿಕ ಆರ್ಥಿಕ ಬೆಳವಣಿಗೆ ಪ್ರಸ್ತುತ 6.5% ಇದ್ದು, ಅಮೆರಿಕ 2.1%ನಷ್ಟು ಆರ್ಥಿಕ ಪ್ರಗತಿಯನ್ನು ಹೊಂದಿದೆ. ಇದೇ ಪ್ರಮಾಣದಲ್ಲಿ ಮುಂದುವರಿದಲ್ಲಿ 2038 ರ ಹೊತ್ತಿಗೆ ಭಾರತದ ಜಿಡಿಪಿಯು ಖರೀದಿ ಶಕ್ತಿ ಹೋಲಿಕೆ(ಪಿಪಿಪಿ)ಯಲ್ಲಿ ಅಮೆರಿಕವನ್ನು ದಾಟಲಿದೆ. 2030ರ ಹೊತ್ತಿಗೆ ಚೀನಾದ ಜಿಡಿಪಿ ಪಿಪಿಪಿ ಮಾನದಂಡದಲ್ಲಿ 42.2 ಲಕ್ಷ ಕೋಟಿ ಡಾಲರ್ ಮುಟ್ಟಲಿದೆ. ಆದರೆ ಜನರ ಮಧ್ಯಮ ವಯಸ್ಸು ಜಾಸ್ತಿಯಾಗಿ, ಹೆಚ್ಚುಹೆಚ್ಚು ವಯಸ್ಸಾದವರು ತುಂಬಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಅಮೆರಿಕದ ಬೆದರಿಕೆ ಸುಂಕದ ನಡುವೆಯೂ, ಈಗ ಆಗುತ್ತಿರುವ ರಚನಾತ್ಮಕ ಬೆಳವಣಿಗೆಗಳು ಭಾರತದ ಆರ್ಥಿಕತೆ ಪ್ರಗತಿಗೆ ಪೂರಕವಾಗಲಿದೆ ಎನ್ನುವ ಸಕಾರಾತ್ಮಕ ವರದಿ ಹೊರಬಿದ್ದಿದೆ. ಭಾರತದ ನಾಗರಿಕರ ಮಧ್ಯಮ ವಯಸ್ಸು 28.8 ಇದ್ದು, 2024 ರಲ್ಲಿ ಸಾಲ ಮತ್ತು ಜಿಡಿಪಿ ಅನುಪಾತ 81.3%ನಷ್ಟಿದ್ದು, ಅದು 2030 ರ ಹೊತ್ತಿಗೆ 75.8 %ಗೆ ಇಳಿಯಲಿದೆ. ಇತರ ದೊಡ್ಡ ಆರ್ಥಿಕತೆ ದೇಶಗಳ ನಡುವೆ ಭಾರತದ ನಿರ್ವಹಣೆ ಅತ್ಯುತ್ತಮವಾಗಿದ್ದು, ಎರಡನೇ ಅತಿ ದೊಡ್ಡ ಆರ್ಥಿಕತೆ ದೇಶವಾಗಲಿದೆ ಎಂದು ವರದಿ ತಿಳಿಸಿದೆ.
ಈಗ ಭಾರತ 4.19 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗಿದೆ. ಅಮೆರಿಕ ಆರ್ಥಿಕವಾಗಿ ಬಲವಾಗಿದ್ದರೂ, ಸಾಲದ ಪ್ರಮಾಣ ಹೆಚ್ಚಾಗಿ ಸಂಕಷ್ಟಕ್ಕೀಡಾಗಲಿದೆ, ಜರ್ಮನಿ, ಜಪಾನ್ ತಾಂತ್ರಿಕವಾಗಿ ಮುಂದುವರಿದಿದೆ.