ತುಮಕೂರು : ಭಾಗ್ಯಗಳ ಹೆಸರಲ್ಲಿ ಎಲ್ಲವನ್ನು ಕೊಟ್ಟರೂ ರಾಜ್ಯದಲ್ಲಿರುವ ಜಿಲ್ಲೆಯ ಬಿಸಿಎಂ ಹಾಸ್ಟೆಲ್ಗಳಿಗೆ ಕರ್ನಾಟಕ ಸರ್ಕಾರದಿಂದ ಅಕ್ಕಿ ಪೂರೈಕೆಯಾಗಿಲ್ಲ ಎಂಬ ವರದಿ ಮಾಧ್ಯಮಗಳಲ್ಲಿ ಎರಡು ದಿನಗಳ ಹಿಂದೆ ವರದಿಯಾಗಿತ್ತು.ಬಿಸಿಎಂ ಹಾಸ್ಟೆಲ್ಗಳಿಗೆ ಅಕ್ಕಿ ಸಾಲ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗೀತಮ್ಮ ಅವರನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ ದಯಾನಂದರಿಂದ ಅಮಾನತು ಮಾಡಿ ಆದೇಶ ಹೊಡಿಸಿದ್ದಾರೆ.
ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲದ ರೂಪದಲ್ಲಿ ಹಾಸ್ಟೆಲ್ಗಳು ಪಡೆದಿವೆ ಎಂದು ಮಠದ ಆಡಳಿತಾಧಿಕಾರಿ ವಿಶ್ವನಾಥ್ ಸ್ಪಷ್ಟನೆ ನೀಡಿದ್ದರು,ಕಳೆದ ಎರಡು ಮೂರು ತಿಂಗಳ ಹಿಂದೆ ಅಕ್ಕಿ ಕೊಟ್ಟಿದ್ದೇವೆ. ಬಿಸಿಎಂ ಹಾಸ್ಟೆಲ್, ಶಾಲೆಗಳಿಗೆ ಅಕ್ಕಿ ಪೂರೈಕೆ ವಿಳಂಬವಾಗಿ ಮಠದಿಂದ ಪಡೆದುಕೊಂಡಿದ್ದಾರೆ. ಹಲವು ಬಾರಿ ಸಾಲ ತೆಗೆದುಕೊಂಡು ಹೋಗಿದ್ದಾರೆ. ನಮಗೆ ಅದರ ಲೆಕ್ಕ ಇಲ್ಲ. ಅಕ್ಕಿ ತೆಗೆದುಕೊಂಡು ಹೋಗಿರುವುದು ಮಾತ್ರ ಗ್ಯಾರಂಟಿ ಎಂದು ತಿಳಿಸಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಸರಿಯಾದ ಸಮಯಕ್ಕೆ ಅಕ್ಕಿ ವಿತರಣೆ ಆದರೂ, ಕಲ್ಯಾಣಾಧಿಕಾರಿ ಗೀತಮ್ಮ ಹಾಸ್ಟೆಲ್ಗಳಿಗೆ ಅಕ್ಕಿಯನ್ನು ಎತ್ತುವಳಿ ಮಾಡಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.ಕರ್ತವ್ಯ ಲೋಪ ಎಸಗಿದ್ದ ಅಧಿಕಾರಿಯನ್ನು ಅಮಾನತುಮಾಡಿದ್ದು ಅಲ್ಲದೆ ಹಾಸ್ಟೆಲ್ ಗೆ ಬೇಕಾದ ಅಕ್ಕಿಯನ್ನು ವಿತರಿಸಲು ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


