ತುಮಕೂರು : ಕಲ್ಪತರುನಾಡಿನಲ್ಲಿ ನಿನ್ನೆಯಿಂದ ಎರಡು ದಿನಗಳ ಕಾಲ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿರುವ 39 ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯುಕ್ತ ಚಾಲನೆ ನೀಡಿದರು.
ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿರುವ39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ವೇದಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಮಿಸುತ್ತಿದ್ದಂತೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಪತ್ರಕರ್ತರು ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು ಸಮ್ಮೇಳನದಲ್ಲಿ ಅಂಗವಾಗಿ ತೆರೆಯಲಾಗಿರುವ ವಿವಿಧ ಇಲಾಖೆಗಳು ಹಾಗೂ ವಿವಿಧ ಸಂಸ್ಥೆಗಳ ಸುಮಾರು 30ಕ್ಕೂ ಅಧಿಕ ಮಳಿಗೆಗಳನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿ ವೀಕ್ಷಿಸಿದರು. ಸಮ್ಮೇಳನದ ಆವರಣದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಸ್ಥಳೀಯ ಪತ್ರಿಕೆಗಳ ಮಳಿಗೆಗೆ ತೆರಳಿ ವೀಕ್ಷಿಸಿದರು.
ಸಮ್ಮೇಳನವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತನಾಡಿ, ಪತ್ರಕರ್ತರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು. ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವಂತಹ ಸುದ್ದಿಗಳನ್ನು ವೈಭವೀಕರಿಸಬಾರದು ಎಂದು ಸಲಹೆ ನೀಡಿದರು.
ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಜತೆಗೆ ಕುಟುಂಬದ ಆಗು-ಹೋಗುಗಳ ಬಗ್ಗೆಯೂ ಗಮನ ಹರಿಸುತ್ತಿರಬೇಕು ಎಂದು ಹೇಳಿದರು.
ಪತ್ರಕರ್ತರ ಸಮಸ್ಯೆಗಳ ನಿವಾರಣೆಗೆ ನಮ್ಮ ಸರ್ಕಾರ ಸದಾ ಬದ್ದವಾಗಿದೆ ಎಂದು ಅವರು ತಿಳಿಸಿದರು. ಸ್ಮರಣ ಸಂಚಿಕೆಯನ್ನು ಬಿಡುಗಡೆಮಾಡಿದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ತುಮಕೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಮಾಡುವಂತೆ ಈ ಹಿಂದೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ರವರಿಗೆ ತಿಳಿಸಿದ್ದೆ. ಅದರಂತೆ ಇಂದು ಸಮ್ಮೇಳನ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಿದ್ದು, ಸಮಸ್ಯೆಗಳು, ಸೌಲಭ್ಯಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಬೇಕು ಎಂದರು.
ಸಮಾರAಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಶಾಸಕ ಜ್ಯೋತಿಗಣೇಶ್, ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿ.ಪಂ. ಸಿಇಓ ಜಿ. ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಬಿ.ವಿ. ಅಶ್ವಿಜಾ, ಕೆಯುಡಬ್ಲು÷್ಯಜೆ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ರಘುರಾಮ್, ಹಿರಿಯ ಪತ್ರಕರ್ತರಾದ ಎಸ್. ನಾಗಣ್ಣ ಮತ್ತಿತರರು ಉಪಸ್ಥಿತರಿದ್ದರು.