ತಿರುವನಂತಪುರ : ಮಹಿಳೆಯರು ಮನೆಯೊಳಗೇ ಇರಬೇಕು, ಸಾರ್ವಜನಿಕ ರಂಗಕ್ಕೆ ಪ್ರವೇಶಿಸಿದರೆ ವಿನಾಶ ಖಚಿತ ಎಂದು ಕೇರಳದ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ಅಲಿಯಾಸ್ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಕೊಚ್ಚಿಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬೆಲೆಬಾಳುವ ಚಿನ್ನದ ಹಾರವನ್ನು ಪೆಟ್ಟಿಗೆಯೊಳಗೆ ಸುರಕ್ಷಿತವಾಗಿ ಇಡುವಂತೆ ಮಹಿಳೆಯರೂ ತಮ್ಮ ಶ್ರೇಷ್ಠತೆಯನ್ನು ಕಾಪಾಡಿಕೊಳ್ಳಲು ಮನೆಯೊಳಗೇ ಸುರಕ್ಷಿತವಾಗಿರಬೇಕು ಎಂದು ಹೇಳಿದ್ದಾರೆ.
ಇಸ್ಲಾಂ ಮಹಿಳೆಯರಿಗೆ ಶ್ರೇಷ್ಠ ಸ್ಥಾನ ನೀಡಿದೆ. ಸಾರ್ವಜನಿಕ ಕ್ಷೇತ್ರಕ್ಕೆ ಮಹಿಳೆಯರ ಪ್ರವೇಶದ ಮೇಲಿನ ನಿರ್ಬಂಧಗಳನ್ನು ಗೌರವದ ರೂಪದಲ್ಲಿ ನೋಡಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಹೇಳಿಕೆಗೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸಚಿವರಾದ ಬಿಂದು, ಕೃಷ್ಣ ರೋಜಿ ಹಾಗೂ ಎಂ. ಜಾನ್ ಸೇರಿದಂತೆ ಹಲವು ನಾಯಕರು ಟೀಕಿಸಿದ್ದಾರೆ.
ಸಿಪಿಎಂ ನಾಯಕಿ ಪಿ.ಕೆ. ಶ್ರೀಮತಿ ಅವರು, “ಇದನ್ನು ಹಿರಿಯ ನಾಗರಿಕರೊಬ್ಬರ ಹೇಳಿಕೆ ಎಂದು ನಿರ್ಲಕ್ಷಿಸಿದರೆ ಇತಿಹಾಸ ಕೇರಳವನ್ನು ಕ್ಷಮಿಸುವುದಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಂವಿಧಾನ ಮಹಿಳೆಯರಿಗೆ ಸಂಚಾರ, ಅಭಿವ್ಯಕ್ತಿ, ಶಿಕ್ಷಣ ಹಾಗೂ ಉಡುಪು ಧರಿಸುವ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳನ್ನು ನೀಡಿದೆ. ಇಂತಹ ಹೇಳಿಕೆಗಳು ಮತ್ತೆ ಸ್ತ್ರೀದ್ವೇಷವನ್ನು ಬಿತ್ತುತ್ತವೆ” ಎಂದು ಅವರು ಹೇಳಿದ್ದಾರೆ.

