ಚಿತ್ರದುರ್ಗ : ಜಿಲ್ಲೆಯ ಮೊಳಕಾಲ್ಮುರು ತಾಲೂಕಿನಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪರಿಣಾಮ ಭೂಮಿ ಕಾದ ಕುಲುಮೆಯಂತಾಗಿದೆ.

ಹೆಚ್ಚುತ್ತಿರುವ ರಣಬಿಸಿಲಿಗೆ ಬಹುತೇಕ ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದು ಅಂತರ್ಜಲ ಪಾತಾಳ ಕಂಡಿದೆ, ಜಲಕ್ಷಾಮವೆಂಬುವುದು ಬರಸಿಡಿಲಿನಂತೆ ಬಂದಪ್ಪಳಿಸಿದೆ.
ತಾಲೂಕಿನಲ್ಲಿ ಬಿಜಿಕೆರೆ, ಮೊಗಲಹಳ್ಳಿ, ಸೂರಮ್ಮನಹಳ್ಳಿ,ಬೆಳವಿನಮರದಹಟ್ಟಿ, ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಅಭಾವ ತಲೆದೂರಿದೆ.
ಕಳೆದ 15ದಿನಗಳಿಂದ ನೀರಿನ ಬವಣೆ ಹೆಚ್ಚಿದ್ದು,ಸಮಸ್ಯೆ ಇನ್ನಷ್ಟು ಬಿಗಾಡಯಿಸಿದೆ. ಕುಡಿಯುವ ನೀರಿನ ಬವಣೆ ಜನರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ತಟ್ಟಿದೆ.
ಬಿಜಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾದ ಪರಿಣಾಮ ಈಗಾಗಲೇ ಪರ್ಯಾಯವಾಗಿ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.ನೀರಿಗಾಗಿ ಜನರು ಟ್ಯಾಂಕರ್ ಮೇಲೆ ಹತ್ತಿ ಸ್ಪರ್ಧೆಗೆ ಇಳಿದವರಂತೆ ಕೊಡದಲ್ಲಿ ನೀರು ತುಂಬುತ್ತಿರುವ ದೃಶ್ಯಗಳು ಕಂಡುಬರುತ್ತಿವೆ, ಹಗಲು ರಾತ್ರಿಯನ್ನದೇ ಮಹಿಳೆಯರು ಮತ್ತು ಮಕ್ಕಳು ಹನಿ ನೀರಿಗಾಗಿ ಸರತಿ ಸಾಲಿನಲ್ಲಿ ನಿಂತು ಕೊಡ ಹಿಡಿಯುತ್ತಿದ್ದಾರೆ.
ಸ್ಥಳೀಯ ಆಡಳಿತದ ವೈಫಲ್ಯದಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ಅಧಿಕಾರಿಗಳು ನೀರಿನ ಮೂಲ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ, ಭೀಕರ ಬರಗಾಲದಲ್ಲಿ ಜೀವ ಜಲಕ್ಕೆ ಜನರು ಪರದಾಡುತ್ತಿದ್ದು ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.


