ಚಿತ್ರದುರ್ಗ ; ಕುಡಿಯುವ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಟಿ.ನುಲೇನೂರು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಧರಣಿ ನಡೆಸಿದ ಘಟನೆ ಇಂದು ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಗ್ರಾಮದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರಿನ ಮಸ್ಯೆ ಇದ್ದು, ಇಲ್ಲಿಯವರೆಗೂ ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ತಲೆಕಡೆಸಿಕೊಂಡಿಲ್ಲ. ಇದರಿಂದ ಗ್ರಾಮಸ್ಥರು ಬೆಸತ್ತು ಹೋಗಿದ್ದಾರೆ.
ಗ್ರಾಮದಲ್ಲಿ ಸುಮಾರು 600 ಮನೆಗಳಿದ್ದು, 2 ಸಾವಿರಕ್ಕೂ ಹೆಚ್ವು ಜನಸಂಖ್ಯೆಯನ್ನು ಹೊಂದಿದೆ. ಬೇಸಿಗೆ ಬಂದಿತೆಂದರೆ ಗ್ರಾಮದಲ್ಲಿ ಕುಡಿಯುವ ನೀರಿನ ಹಾಹಾಕಾರ ತಾಂಡವವಾಡುತ್ತದೆ. ಮಹಿಳೆಯರು ಮಕ್ಕಳು ಕೊಡಗಳನ್ನು ಹಿಡಿದು ಬೇರೆ ಊರಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದಲ್ಲಿ ಲಿಂಗಾಯಿತರ ಹಟ್ಟಿ ಹಾಗೂ ಎಸ್ಸಿ ಕಾಲೋನಿಗಳಿದ್ದು, 5 ಕೊಳವೆ ಭಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಕೊಳವೆ ಬಾವಿಯಲ್ಲಿ ನೀರು ಪೂರ್ಣ ಪ್ರಮಾಣದಲ್ಲಿ ಇದ್ದರೂ ಕೂಡ ಎಸ್ಸಿ ಕಾಲೋನಿಯ ಜನರಿಗೆ ನೀರು ಬಿಡಲು ಇಲ್ಲಿನ ವಾಲ್ ಮ್ಯಾನ್ ತಾರತಮ್ಯ ಮಾಡುತ್ತಿದ್ದಾರೆ. ಲಿಂಗಾಯತರು ತಮ್ಮ ಅಡಿಕೆ ತೋಟಗಳಿಗೆ ಗ್ರಾಮದಲ್ಲಿನ ಕೊಳವೆ ಬಾವಿಗಳಿಂದ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಇದರಿಂದ ನೀರಿನ ಟ್ಯಾಂಕ್ ಗೆ ನೀರು ಸರಬರಾಜು ಆಗದೆ, ಗ್ರಾಮಸ್ಥರಿಗೆ ನೀರು ಪೂರೈಕೆ ಆಗುತ್ತಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಇಂದು ಬೆಳಗ್ಗೆ ಗ್ರಾಮ ಪಂಚಾಯಿತಿ ಮುಂದೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರಲ್ಲದೆ, ಕಚೇರಿಗೆ ಬೀಗ ಜಡಿದು ಧರಣಿ ನಡೆಸಿದರು. ಕೂಡಲೇ ಕುಡಿಯುವ ನೀರು ಸರಬರಾಜು ಮಾಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದರು.ಜನಪ್ರತಿನಿಧಿಗಳು ಮತ ಕೇಳುವ ಮುನ್ನಾ ನೀರು ಕೊಡಿ, ನಂತರ ಮತ ಕೇಳಲು ಬನ್ನಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.


