ಚಿಕ್ಕಮಗಳೂರು : ಬಿಜೆಪಿ ಹಿರಿಯ ನಾಯಕ,ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಪ್ರಯಾಣಿಸುತ್ತಿದ್ದ ಕಾರು ಕಡೂರು ತಾಲೂಕಿನ ಹೇಮಗಿರಿ ಬಳಿ ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘತಕ್ಕೀಡಾಗಿದ್ದು ಮಾಧುಸ್ವಾಮಿ ಹಾಗೂ ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಕಡೂರು ತಾಲ್ಲೂಕಿನಲ್ಲಿರುವ ಹೇಮಗಿರಿ ಗೇಟ್ ಬಳಿ ಗುಜರಿ ಆಟೋವೊಂದಕ್ಕೆ ಗುದ್ದಿದ್ದು ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.
ಮಾಜಿ ಸಚಿವ ಮಾಧುಸ್ವಾಮಿ ಇಂದು ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಾನಭೋಗನಹಳ್ಳಿ, ಹೆಚ್.ರಂಗಾಪುರ, ನೇರಲಕೆರೆ, ಸೊಕ್ಕೆ ಸೇರಿದಂತೆ ವಿವಿಧ ಗ್ರಾಮದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಪರ ಮತಯಾಚನೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಒನ್ ವೇಯಲ್ಲಿ ಬರುತ್ತಿದ್ದ ಗೂಡ್ಸ್ ವಾಹನ ತಪ್ಪಿಸಲು ಹೋಗಿ ಕಾರು ಅಪಘಾತಕ್ಕೆ ಒಳಗಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ಹೊಡೆತಕ್ಕೆ ಮಾಧುಸ್ವಾಮಿ ಪ್ರಯಾಣಿಸುತ್ತಿದ್ದ ಕಾರಿನ ಮುಂಭಾಗ ಜಖಂಗೊಂಡಿದೆ. ಅಪಘಾತ ಹಿನ್ನೆಲೆಯಲ್ಲಿ ಕೆಲ ಕಾಲ ರಸ್ತೆ ಸಂಚಾರದಲ್ಲಿ ಅಡಚಣೆ ಉಂಟಾಗಿದೆ.
ಕೆಲ ತಿಂಗಳುಗಳಿಂದ ಮಾಧುಸ್ವಾಮಿಯವರ ರಾಜಕೀಯ ಬದುಕಿನಲ್ಲಿ ಹಿತಕರವೆನಿಸುವ ಸಂಗತಿಗಳು ಸಂಭವಿಸುತ್ತಿಲ್ಲ. ಮೊದಲಿಗೆ ಅವರು ವಿಧಾನಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲು ಅನುಭವಿಸಿದರು. ಲೋಕಸಭಾ ಚುನಾವಣೆಯಲ್ಲಿ ಅವರು ತುಮಕೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ವರಿಷ್ಠರು, ವಿ ಸೋಮಣ್ಣ ಅವರಿಗೆ ಟಿಕೆಟ್ ನೀಡಿದರು.
ಕಡೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಕಾರು ಗುದ್ದಿದ ಪರಿಣಾಮ ಆಟೋ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಸಚಿವರ ಕಾರು ನಿಗದಿತ ವೇಗದಲ್ಲಿ ಕಾರಣ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಅಪಘಾತದ ಬಳಿಕ ಮಾಧುಸ್ವಾಮಿ ಕಾರಿನಿಂದ ಇಳಿದ ಆಟೋ ಚಾಲಕನ ಯೋಗಕ್ಷೇಮ ವಿಚಾರಿಸಿದ್ದಾರೆ. ಬಳಿಕ ತರೀಕೆರೆ ಮಾಜಿ ಶಾಸಕ ಸ್.ಎಂ.ನಾಗರಾಜು ಅವರು ತಮ್ಮ ಕಾರನ್ನ ತಂದು ಮಾಧುಸ್ವಾಮಿ ಅವರನ್ನ ಪ್ರಚಾರಕ್ಕೆ ಕರೆದೊಯ್ದಿದ್ದಾರೆ.
ಸ್ಥಳಕ್ಕೆ ಕಡೂರು ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.


