ಚಿಕ್ಕಮಗಳೂರು : ಮಳೆರಾಯ ಈಗ ಕೊಂಚ ವಿರಾಮನೀಡಿದ್ದಾನೆ ಯಾಕೆಂದರೆ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುವ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥಗೊಂಡಿದೆ.ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣ ಕಳೆದ ನಾಲ್ಕು ದಿನದಿಂದ ಅಬ್ಬರಿಸಿ ಇಂದು ಕೊಂಚ ವಿರಾಮ ನೀಡಿದ್ದಾನೆ.ಜಿಲ್ಲೆಯಲ್ಲಿ ಜನಸಾಮನ್ಯರು ಗುಡ್ಡ ಕುಸಿತದಿಂದ ಭೀತಿ ಎದುರಿಸುತ್ತಿದ್ದು ಇದೀಗ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮತ್ತೆ ಗುಡ್ಡ ಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.
ಮಳೆನಿಂತರೂ ಮಳೆಯಿಂದ ಅವಾಂತರಗಳ ಸರಮಾಲೆಗಳೇ ಸೃಷ್ಟಿಯಾಗಿದ್ದು ಜನ ವರುಣಾರ್ಭಟಕ್ಕೆ ಕಂಗೆಟ್ಟು ಹೋಗಿದ್ದಾರೆ.ಚಿಕ್ಕಮಗಳೂರು ನಗರದಿಂದ ದತ್ತಪೀಠಕ್ಕೆ ಸಂಪರ್ಕಿಸುವ ಮಾರ್ಗದಲ್ಲಿ ಕವಿಕಲ್ ಗಂಡಿ ಬಳಿ ಗುಡ್ಡ ಕುಸಿದಿದೆ. ರಸ್ತೆ ಮೇಲೆ ಮಣ್ಣು ಮತ್ತು ಕಲ್ಲು ಬಿದ್ದಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ದತ್ತಪೀಠಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ.ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಚಿಕ್ಕಮಗಳೂರು ನಗರ, ಕೊಪ್ಪ, ಶೃಂಗೇರಿ, ಮೂಡಿಗೆರೆ, ಕಳಸ ಎನ್. ಆರ್.ಪುರ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿತ್ತು. ಇದರಿಂದ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸಾಲು ಸಾಲು ಗುಡ್ಡು ಕುಸಿತವಾಗಿದೆ. ಚಿಕ್ಕಮಗಳೂರು ನಗರದ ಅಂಗಡಿಗಳ ಮುಂದೆ ಮಲಗಿದ್ದ 15 ಜನ ನಿರಾಶ್ರಿತರನ್ನು ರಕ್ಷಣೆ ಮಾಡಿ, ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ.