ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಿಂದ ವಾಪಸ್ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಕೊಳ್ಳೇಗಾಲದ ಪುಟ್ಟನಂಜಮ್ಮ ಹಾಗೂ ಕುದೇರು ಗ್ರಾಮದ ಮಹೇಶ್ ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಮೊದಲು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರು ಹಾಗೂ ಚಾಮರಾಜನಗರ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ವೇಳೆ ಆಂಬುಲೆನ್ಸ್‌ಗಳ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವಾಹನ ಚಾಲಕರು ತಮ್ಮ ಖಾಸಗಿ ಕಾರುಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ಮಹದೇಶ್ವರಸ್ವಾಮಿ ದರ್ಶನ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಾಲಕನ ಅಜಾಗರೂಕತೆಯಿಂದಲೇ ಅಪಘಾತ ನಡೆದಿದೆ ಎಂದು ಕೆಲ ಪ್ರಯಾಣಿಕರು ಆರೋಪಿಸಿದ್ದಾರೆ.
ಬಸ್ ರಸ್ತೆ ಬದಿಯ ಬೇವಿನ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ದೊಡ್ಡ ಅನಾಹುತ ತಪ್ಪಿದ್ದು, ಇಲ್ಲದಿದ್ದರೆ ಬಸ್ ಕಂದಕಕ್ಕೆ ಉರುಳಿ ಇನ್ನಷ್ಟು ಜೀವಹಾನಿಯಾಗುವ ಸಾಧ್ಯತೆ ಇತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಅಪಘಾತದಲ್ಲಿ ಬಹುತೇಕ ಪ್ರಯಾಣಿಕರಿಗೆ ಕೈ, ಕಾಲು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.



