ಚಳ್ಳಕೆರೆ : ಉಪಗ್ರಹ ಉಡಾವಣೆಯಲ್ಲಿ ಶೇ. 80ರಷ್ಟು ಉಳಿತಾಯ ಉಂಟು ಮಾಡುವ ಮರುಬಳಕೆ ಮಾಡಬಹುದಾದ ಉಡ್ಡಯನ ವಾಹನ ಪುಷ್ಪಕ್, ಆರ್ಎಲ್ವಿ ಲೆಕ್ಸ್ 02 ಪ್ರಯೋಗ ಶುಕ್ರವಾರ ಚಳ್ಳಕೆರೆಯ ಡಿಆರ್ಡಿಓನಲ್ಲಿ ಯಶಸ್ವಿಯಾಗಿ ನಡೆದಿದೆ.
ಚಳ್ಳಕೆರೆ ಪಟ್ಟಣಕ್ಕೆ ಸಮೀಪದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವ್ಯಾಪ್ತಿಯಲ್ಲಿರುವ ಏರೋನಾಟಿಕಲ್ ಟೆಸ್ಟ್ರೇಂಜ್ (ಎಟಿಆರ್)ನಲ್ಲಿ ಶುಕ್ರವಾರ ಬೆಳಗ್ಗೆ 6.30 ಕ್ಕೆ ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್, ಪುಷ್ಪಕ್ ಹೆಸರಿನ ಆರ್ಎಲ್ವಿ ಲೆಕ್ಸ್ 2 ನ್ನು ಹೊತ್ತು ನಭಕ್ಕೆ ಚಿಮ್ಮಿತು. ಭೂಮಿಯಿಂದ 4.5 ಕಿ.ಮೀ ಎತ್ತರದಿಂದ ಪುಷ್ಪಕ್ (ಆರ್ಎಲ್ವಿ ಲೆಕ್ಸ್ 2)ನ್ನು ಬಿಡುಗಡೆಗೊಳಸಲಾಯಿತು. ನಂತರ ಕ್ಷಣಾರ್ಧದಲ್ಲೇ ಪೂರ್ವ ನಿಗದಿಯಾದ ರನ್ವೇ ಮೇಲೆ ಬಂದಿಳಿಯಿತು.
ಮರುಬಳಕೆ ರಾಕೆಟ್ ಅಭಿವೃದ್ಧಿಪಡಿ ಸುವಲ್ಲಿ ಇದು ಎರಡನೇ ಪ್ರಯೋಗವಾಗಿದ್ದು, ಈ ಹಿಂದೆ ಏಪ್ರಿಲ್ 2, 2023 ರಲ್ಲಿ ಇದೇ ಪ್ರದೇಶದಲ್ಲಿ ಆರ್ಎಲ್ವಿ ಲೆಕ್ಸ್ 01 ಹೆಸರಿನ ಪ್ರಯೋಗ ಯಶಸ್ವಿಯಾಗಿತ್ತು. ಇಡೀ ಪ್ರಯೋಗ ಪೂರ್ವ ಲೆಕ್ಕಾಚಾರದಂತೆ ಕೈಗೊಳ್ಳುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.
ಇಡೀ ಪ್ರಪಂಚದಲ್ಲಿ ಈ ರೀತಿಯ ಪ್ರಯೋಗ ಮೊದಲ ಬಾರಿಗೆ ಇಸ್ರೋ ಕೈಗೊಂಡಿದ್ದು, ಹೆಲಿಕಾಪ್ಟರ್ ಮೂಲಕ ಆರ್ಎಲ್ವಿಯನ್ನು ಭೂಮಿಯಿಂದ ಮೇಲಕ್ಕೇರಿಸಿ ನಂತರ ರನ್ವೇಗಿಳಿಸುವುದು ವಿಶಿಷ್ಟ ಪ್ರಯತ್ನವಾಗಿದೆ.
ಒಂದು ತಿಂಗಳಿನಿಂದ ಡಿಆರ್ಡಿಓದ ಪ್ರದೇಶದಲ್ಲಿ ಇಸ್ರೋ ಪ್ರಯೋಗ ನಡೆಸಿತ್ತು. ಭಾರತೀಯ ವಾಯುಪಡೆಯ ಯೋಧರು ಚಿನೂಕ್ ಹೆಲಿಕಾಪ್ಟರ್ ಬಳಸಿ ಅತ್ಯಂತ ಸೂಕ್ಷ್ಮ ಹಾಗೂ ನಿಖರವಾಗಿ ಇಳಿಸಿದ್ದಾರೆ.


