ಗದಗ : ಈಗಷ್ಟೇ ಜಾತಿ ಗಣತಿ ನಡೆಸಿ ನಿಟ್ಟುಸಿರು ಬಿಟ್ಟಿರುವ ಗದಗ ಜಿಲ್ಲೆಯ ಶಿಕ್ಷಕರಿಗೆ ನಾಯಿ ಗಣತಿ ಕೆಲಸ ಎದುರಾಗಿದೆ. ಗದಗ ಜಿಲ್ಲೆ ಯಾದ್ಯಂತ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಬೀದಿ ನಾಯಿ ಉಪಟಳ ನಿಯಂತ್ರಣಕ್ಕೆ ಕೈಗೊಂಡಿರುವ ವಿನೂತನ ಉಪಾಯ ಇದು. ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಬೀದಿನಾಯಿಗಳ ಸಂಖ್ಯೆ ಲೆಕ್ಕ ಮಾಡಲು ಶಿಕ್ಷಕರು, ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ಫರ್ಮಾನು ಹೊರಡಿಸಿರುವುದರಿಂದ ಶಿಕ್ಷಕರು ಸಮೀಕ್ಷೆಗೆ ತೆರಳುವ ಅನಿವಾರ್ಯತೆ ಬಂದಿದೆ.
ಸರ್ವೋಚ್ಚ ನ್ಯಾಯಾಲಯ ಬೀದಿನಾಯಿಗಳ ಉಪಟಳ ತಡೆಯಲು ಸ್ಥಳೀಯ ಸಂಸ್ಥೆಗಳು ಬೀದಿನಾಯಿಗಳನ್ನು ಹಿಡಿದು ದೂರದ ಸ್ಥಳಕ್ಕೆ ಸಾಗಿಸುವಂತೆ ಆದೇಶಿಸಿದೆ.ಈ ಆದೇಶವನ್ನೇ ಗುರಾಣಿಯಾಗಿಸಿಕೊಂಡಿರುವ ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಈ ಸೂಚನೆ ನೀಡಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲನೆ ಮಾಡುವದಿದ್ದಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರಿಂದಲೇ ಸಮೀಕ್ಷೆ ನಡೆಸಿ ವರದಿ ಪಡೆದು ಸ್ಥಳಾಂತರಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.


