ಗಜೇಂದ್ರಗಡ : ತಾಲೂಕಿನ ಚಿಲ್‌ಝರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು ಓರ್ವ ಶಿಕ್ಷಕ ಹಾಗೂ ವಿದ್ಯಾರ್ಥಿಗೆ ತಲೆಗೆ ಪೆಟ್ಟುಬಿದ್ದ ಘಟನೆ ಸೋಮವಾರ ನಡೆದಿದೆ. ವಿದ್ಯಾರ್ಥಿಗೆ ತಲೆ, ಬೆನ್ನಿನ ಮೇಲೆ ಗಾಯವಾಗಿದ್ದು, ಶಾಲಾ ಸಹ ಶಿಕ್ಷಕ ಎಂ.ಡಿ.ಒಂಟಿ ಅವರ ತಲೆಗೂ ಪೆಟ್ಟುಬಿದ್ದ ಪರಿಣಾಮ ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶಾಲೆಯ 6 ನೇ ತರಗತಿ ವಿದ್ಯಾರ್ಥಿಗಳು ಹಾಲು ಕುಡಿಯಲು ಹೊರಗೆ ಬಂದಿದ್ದರಿAದ ಹೆಚ್ಚಿನ ಅನಾಹುತ ಆಗಿಲ್ಲ ಎಂದು ತಿಳಿದಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಆಡಳಿತ ಹಾಗೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಶಾಲಾ ಆವರಣದಲ್ಲಿ ನೆರೆದಿದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರವು ಶಾಲಾ ಅಭಿವೃದ್ಧಿಗೆ ಗ್ರಾಪಂ, ತಾಪಂ ಹಾಗೂ ಶಿಕ್ಷಣ ಇಲಾಖೆ ಮೂಲಕ ಪ್ರಸ್ತಾವನೆ ಸಲ್ಲಿಸಲು ಅವಕಾಶ ನೀಡುವುದರ ಜತೆಗೆ ಅಗತ್ಯ ಅನುದಾನವನ್ನು ಸಹ ಬಿಡುಗಡೆ ಮಾಡುತ್ತದೆ. ಆದರೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ದುರಸ್ತಿಗೆ ಪತ್ರ ಬರೆದಿದ್ದರು ಸಹ ಕ್ರಮಕ್ಕೆ ಮುಂದಾಗದ ಪರಿಣಾಮ ಈ ಅವಘಡ ಸಂಭವಿಸಿದೆ. ಶಾಲಾ ಮೇಲ್ಛಾವಣಿ ಸೇರಿ ದುರಸ್ತಿ ಹಂತಕ್ಕೆ ಬಂದಿರುವ ತಾಲೂಕಿನ ಯಾವುದೇ ಶಾಲೆಗಳ ಕೊಠಡಿಯಲ್ಲಿ ಬೋಧನೆ ನಡೆಸದಂತೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆ ಹಾಗೂ ಆಡಳಿತ ವರ್ಗ ತಾಲೂಕಿನಲ್ಲಿ ಶಾಲಾ ದುರಸ್ತಿಗೆ ಬಂದಿರುವ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ವಿಲೇವಾರಿಗೆ ಮುಂದಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ .