ಗಂಗಾವತಿ : ಮೋದಿ ಹೆಸರೇಳುವ ಯುವಕರು ಮತ್ತು ವಿದ್ಯಾರ್ಥಿಗಳ ಕೆನ್ನೆಗೆ (ಕಪಾಳ) ಹೊಡೆಯಿರಿ ಎಂದು ಕರೆ ನೀಡಿದ್ದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗುವ ಮೂಲಕ ಮುಜುಗುರಕ್ಕೀಡು ಮಾಡಿದ ಘಟನೆ ನಡೆದಿದೆ.
ಕನಕಗಿರಿಯ ಐತಿಹಾಸಿಕ ಕನಕಾಚಲ ದೇವಸ್ಥಾನ ಜಾತ್ರೆ ಮತ್ತು ರಥೋತ್ಸವದ ಅಂಗವಾಗಿ ಭಾನುವಾರ ನಡೆದ ಗರುಡೋತ್ಸವದಲ್ಲಿ ಕನಕಗಿರಿ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾಗಿಯಾಗಿದ್ದರು.
ಗರುಡೋತ್ಸವದಲ್ಲಿ ಭಾಗಿಯಾಗಲು ತಮ್ಮ ಬೆಂಬಲಿಗರೊಂದಿಗೆ ದೇವಸ್ಥಾನದ ಮುಂಭಾಗದಲ್ಲಿ ಸಚಿವ ಶಿವರಾಜ ತಂಗಡಗಿ ಬರುತ್ತಿದ್ದಂತಯೆ ಉತ್ಸವದ ಉದ್ದೇಶಕ್ಕೆ ನೆರೆದ ಅಪಾರ ಜನಸ್ತೋಮದ ಮಧ್ಯೆ ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗಿ ಶಿವರಾಜ ತಂಗಡಗಿಯನ್ನು ಸ್ವಾಗತಿಸಿದರು.
ಜನದಟ್ಟಣೆ ಮಧ್ಯೆ ಅನಿರೀಕ್ಷಿತವಾಗಿ ತೂರಿ ಬಂದ ಯುವಕರ ಈ ಮೋದಿ ಘೋಷಣೆಯಿಂದ ಕೆಲಕಾಲ ವಿಚಲಿತರಾದ ತಂಗಡಗಿ, ತಮ್ಮ ಮನೋಭಾವನೆ ತೋರಗೊಡದೇ ಬೆಂಬಲಿಗರೊಂದಿಗೆ ಹೆಜ್ಜೆ ಹಾಕಿ ಮುಂದಕ್ಕೆ ಹೋದರು. ಕೇವಲ ಕನಕಗಿರಿ ಉತ್ಸವದ ಮಾತ್ರವಲ್ಲ, ಈಗಾಗಲೆ ತಂಗಡಗಿ ಹೋಗುತ್ತಿರುವ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿಯೂ ಯುವಕರು ಮೋದಿಪರ ಘೋಷಣೆ ಕೂಗುವ ಮೂಲಕ ತಂಗಡಗಿಯನ್ನು ಮುಜುಗುರಕ್ಕೀಡು ಮಾಡುತ್ತಿದ್ದಾರೆ. ಮೋದಿ ಹೆಸರೇಳುತ್ತೇವೆ, ಕೆನ್ನೆಗೆ ಹೊಡೆಯುವಂತೆ ಪರೋಕ್ಷವಾಗಿ ಸವಾಲು ಹಾಕುತ್ತಿದ್ದಾರೆ.