ಕೊಪ್ಪಳ : ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಇದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಇದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಮತ್ತು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ನಗರದ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಮಂಗಳವಾರ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಜಿಲ್ಲಾಮಟ್ಟದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿ, ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ನಮ್ಮ ಭಾಗದ ಜಿಲ್ಲೆಗಳಲ್ಲಿ ಗುಣಮಟ್ಟದ ಕಾಮಗಾರಿಗಳು ಸರಿಯಾಗಿ ನಡೆಯುತ್ತಿಲ್ಲ. ಕಟ್ಟಡಗಳು, ರಸ್ತೆ ಸೇರಿ ವಿವಿಧ ಕಾಮಗಾರಿ ಹಾಳಾಗುತ್ತಿವೆ. ಈ ವರ್ಷ ರಸ್ತೆ ಮಾಡಿದರೆ, ಮುಂದಿನ ವರ್ಷ ದುರಸ್ತಿ ಮಾಡಬೇ ಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಜನನಾಯಕರಾದ ನಾವು ಸರಿ ಇರಬೇಕು ಅಂದಾಗ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದ್ದು, ಮುಖ್ಯಮಂತ್ರಿ ಕೇಳಿದರೂ ಇದನ್ನೇ ಹೇಳುತ್ತೇನೆ. ಅರಣ್ಯ ಇಲಾಖೆಯವರು ಪ್ರತಿವರ್ಷ ಲಕ್ಷಾಂತರ ಗಿಡ ನೆಡುತ್ತಾರೆ. ಹೋಗಿ ನೋಡಿದರೆ ಒಂದೂ ಇರುವುದಿಲ್ಲ ಎಂದು ಅಸಮಾಧಾನ ತೋಡಿಕೊಂಡರು.