Friday, November 22, 2024
Flats for sale
Homeಜಿಲ್ಲೆಕಡಬ ; ಯುವಕಮಂಡಲದ ಹೆಸರಲ್ಲಿ ನಡೆಯುತ್ತಿದೆ ಕಾನೂನು ಬಾಹಿರ ಚಟುವಟಿಕೆ.

ಕಡಬ ; ಯುವಕಮಂಡಲದ ಹೆಸರಲ್ಲಿ ನಡೆಯುತ್ತಿದೆ ಕಾನೂನು ಬಾಹಿರ ಚಟುವಟಿಕೆ.

ಕಡಬ ; ಕಡಬದಿಂದ ಕೋಡಿಂಬಾಳ ಸಂಚರಿಸುವಾಗ ಸಿಗುವ ಯುವಕ ಮಂಡಲಕ್ಕೆ ಮಂಜೂರಾದ ಸ್ಥಳವೊಂದು ಇದೀಗ ಸಂಪೂರ್ಣವಾಗಿ ಮದ್ಯಪಾನಿಗಳ ಮತ್ತು ಅಕ್ರಮಗಳ ಅಡ್ಡೆಯಾಗಿ ಪರಿಣಮಿಸಿದೆ ಎನ್ನುವ ಆರೋಪ ಕೇಳಿಬರುತ್ತಿದೆ.

ಕಡಬ ಹೋಬಳಿಯ ಸರಕಾರಿ ಸಾಮ್ಯದ ಮದ್ಯದಂಗಡಿಯ ಮುಂಭಾಗದಲ್ಲಿರುವ ಕೋಡಿಂಬಾಳ ಗ್ರಾಮದ ಸರ್ವೇ ನಂಬರ್ 266/1A2 ಮತ್ತು ಖಾತೆ ನಂಬರ್ 1103 ರಲ್ಲಿ ಬರುವ ಯುವಕ ಮಂಡಲಕ್ಕೆ ಮಂಜೂರಾಗಿರುವ 0.04 ಸೆಂಟ್ಸ್ ಜಾಗವು ಇದೀಗ ಸಂಪೂರ್ಣವಾಗಿ ಅಕ್ರಮಗಳ ಅಡ್ಡೆಯಾಗಿ ಮಾರ್ಪಟ್ಟಿದೆ ಎನ್ನುವ ಆರೋಪ ಕೇಳಿಬರುತ್ತಿದೆ.ಇಲ್ಲಿ ಯುವಕ ಮಂಡಲವು ಬರೇ ಹೆಸರಿಗಷ್ಟೇ ಸೀಮಿತವಾಗಿದ್ದೂ ಇಲ್ಲಿರುವ ಕಟ್ಟಡಕ್ಕೂ ನಾಮಫಲಕ,ರಿಜಿಸ್ಟರ್ ನಂಬರ್ ಅಳವಡಿಸಲಾಗಿಲ್ಲ.ಇಲ್ಲಿ ಯುವಕ ಮಂಡಲಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳನ್ನು ನಡೆಸಲಾಗುತ್ತಿಲ್ಲ ಬದಲಾಗಿ ದಾಖಲೆಗಳನ್ನು ಸೃಷ್ಟಿ ಮಾಡಿ ಕಾರ್ಯಗಳನ್ನು ಮಾಡಿದ್ದಾಗಿ ಬಿಂಬಿಸಲಾಗುತ್ತಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಇಲ್ಲಿರುವ ಕಟ್ಟಡದಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರರೋರ್ವರಿಗೆ ಸಂಬಂಧಿಸಿದ ಕೆಲಸದ ಸಾಮಾಗ್ರಿಗಳು, ಮರಳು,ಜಲ್ಲಿ ಸೇರಿದಂತೆ ವಸ್ತುಗಳನ್ನು ತಂದು ರಾಶಿ ರಾಶಿ ಹಾಕಲಾಗಿದೆ.ಬೆಳಗ್ಗೆ ಇಲ್ಲೇ ಈ ಗುತ್ತಿಗೆದಾರರ ಕಾರ್ಮಿಕರು ಒಟ್ಟು ಸೇರಿ ವಿವಿಧ ಕಡೆಗಳಿಗೆ ಕೆಲಸಕ್ಕೆ ತೆರಳುತ್ತಾರೆ.ಸಂಜೆಯಾದರೆ ಇಲ್ಲೇ ಬಂದು ಸಂಬಳ ಪಡೆದು ಕಾರ್ಮಿಕರು ಹೋಗುತ್ತಾರೆ. ಈ ಬಗ್ಗೆ ಗುತ್ತಿಗೆದಾರರಿಗೆ ಕೇಳಿದರೆ ನಾವು ಬಾಡಿಗೆ ಪಾವತಿ ಮಾಡುತ್ತಿದ್ದೇವೆ ಎನ್ನುತ್ತಾರೆ. ಈ ತರಹ ಯುವಕ ಮಂಡಲ ಅಥವಾ ಯುವತಿ ಮಂಡಲಕ್ಕೆ ಮಂಜೂರಾದ ಸ್ಥಳ ಮತ್ತು ಕಟ್ಟಡಗಳನ್ನು ಬಾಡಿಗೆ ಅಥವಾ ಲೀಸ್‌ಗೆ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ ಎನ್ನುತ್ತಾರೆ ಕಂದಾಯ ಅಧಿಕಾರಿಗಳು. ಇನ್ನು ಸಂಜೆಯಾದರೆ ಸಾಕು ಇಲ್ಲಿ ಸಂಪೂರ್ಣವಾಗಿ ಮದ್ಯಪಾನಿಗಳ ಅಡ್ಡೆಯಾಗಿ ಪರಿಣಮಿಸುತ್ತದೆ.ಮಹಿಳೆಯರಿಗೆ ಮತ್ತು ಹೆಣ್ಣು ಮಕ್ಕಳಿಗೆ ಇಲ್ಲಿ ಸಂಚರಿಸುವುದೇ ದುಸ್ತರವಾಗಿ ಪರಿಣಮಿಸಿದೆ. ಇಷ್ಟೂ ಮಾತ್ರವಲ್ಲದೆ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಡಬ ತಹಶಿಲ್ದಾರ್ ರಮೇಶ್ ಬಾಬು ಅವರು ಈ ಬಗ್ಗೆ ಕೂಡಲೇ ಪರಿಶೀಲನೆ ನಡೆಸಲಾಗುವುದು.ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಂತವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಒಟ್ಟಿನಲ್ಲಿ ನಿಷ್ಕ್ರಿಯವಾಗಿರುವ ಇಂತಹ ಯುವಕಮಂಡಲಕ್ಕೆ ಮಂಜೂರಾಗಿರುವ ಜಾಗವನ್ನು ಸರಕಾರವು ವಾಪಾಸು ಪಡೆದು ನೂತನ ಕಡಬ ತಾಲೂಕಿಗೆ ಸಂಬಂಧಿಸಿದ ಸರಕಾರಿ ಕಚೇರಿಗಳನ್ನು ತೆರೆಯಲು ಉಪಯೋಗಿಸಬಹುದು ಎಂಬುದು ಸಾರ್ವಜನಿಕರ ಮಾತು.

RELATED ARTICLES

LEAVE A REPLY

Please enter your comment!
Please enter your name here

Most Popular