ಕಡಬ : ಕೋವಿಯಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾದ ಘಟನೆ ದ.ಕ ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ ನಡೆದಿದೆ. ಬಾಲಕನ ತಂದೆಯೂ ಚೂರಿಯಿಂದ ಇರಿದ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಕೌಟುಂಬಿಕ ಕಲಹದಲ್ಲಿ ಮನೆಯಲ್ಲಿ ಸಂಘರ್ಷ ನಡೆದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರಾಮಕುಂಜದ ವಸಂತ್ ಅಮೀನ್ ಪುತ್ರ ಮೋಕ್ಷ ಎಂಬ ಬಾಲಕ ಸಾವನ್ನಪ್ಪಿದ್ದು ತಂದೆ ಮತ್ತು ಮಗನ ಮಧ್ಯೆ ಮನೆಯಲ್ಲಿ ಪರಸ್ಪರ ಜಗಳ ನಡೆದ ಮಾಹಿತಿ ದೊರೆತಿದೆ.
ಗಲಾಟೆ ಗಗನಕ್ಕೆ ಏರಿದ್ದು ಈ ವೇಳೆ ಕೋವಿಯಿಂದ ಗುಂಡು ಹಾರಿದ್ದು, ಗುಂಡು ತಗುಲಿ ಬಾಲಕ ಸಾವನ್ನಪ್ಪಿದ್ದಾನೆ.ಬಾಲಕನ ಸಾವು ಹಲವು ಅನುಮಾನಕ್ಕೆ ಕಾರಣವಾಗಿದ್ದು ಬಾಲಕನೇ ಶೂಟ್ ಮಾಡಿಕೊಂಡಿದ್ದಾ ಅಥವಾ ತಂದೆಯೇ ಶೂಟ್ ಮಾಡಿದ್ದಾ ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಬಾಲಕ ಮೋಕ್ಷ ವಿದ್ಯಾರ್ಥಿಯಾಗಿದ್ದು ಗಲಾಟೆಯಲ್ಲಿ ತಂದೆ ವಸಂತ್ ಅಮೀನ್ ಗೂ ಚೂರಿ ಇರಿತದ ಗಾಯವಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದೆ.ಬಾಲಕನ ಸಾವಿಗೆ ನಿಖರ ಕಾರಣ ಇನ್ನೂ ಪತ್ತೆಯಾಗಿದ್ದ ಹಿನ್ನಲೆ ಘಟನೆಗೆ ಸಂಬಂಧಿಸಿದಂತೆ ವಸಂತ ಪೂಜಾರಿ ವಿರುದ್ಧ ಪತ್ನಿ ಜಯಶ್ರೀ ದೂರು ದಾಖಲಿಸಿದ್ದಾರೆ.
ಶೂಟ್ ಮಾಡಿ ಚಾಕುವಿನಿಂದ ತನ್ನನ್ನು ಕೊಯ್ದುಕೊಂಡ ಆರೋಪ ಕೇಳಿಬಂದಿದ್ದು ಗಾಯಗೊಂಡ ಆರೋಪಿಯನ್ನುಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ಒಂದು ವರ್ಷದಿಂದ ಮನೆಯಲ್ಲಿ ತಂದೆ ಮತ್ತು ಮಗ ಮಾತ್ರ ಇದ್ದಿದ್ದು ಪತ್ನಿ ಜಯಶ್ರೀ ಪತಿಯೊಂದಿಗೆ ಮನಸ್ತಾಪಗೊಂಡು ಮಂಗಳೂರಿನ ತನ್ನ ತಾಯಿ ಮನೆಯಲ್ಲಿದ್ದರೆಂದು ತಿಳಿದಿದೆ.ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


