ಉತ್ತರಾಖಂಡ : ಉತ್ತರಾಖಂಡಲ್ಲಿ ಅಕ್ರಮ ಮದರಸಾ ಧ್ವಂಸ ಮಾಡಿದ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದು ವಾಹನಗಳಿಗೂ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ವರದಿಗಳ ಪ್ರಕಾರ ನೈನಿತಾಲ್ ಜಿಲ್ಲಾಡಳಿತ ಮತ್ತು ಸ್ಥಳೀಯ ನಾಗರಿಕ ಅಧಿಕಾರಿಗಳ ಜಂಟಿ ತಂಡವು ನಜುಲ್ ಭೂಮಿಯಲ್ಲಿ ಮದರಸಾವನ್ನು ನೆಲಸಮವನ್ನು ಮಾಡಿತ್ತು. ಇದರಿಂದ ಕೋಪಗೊಂಡ ಸ್ಥಳೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಪರಿಸ್ಥಿತಿ ಹದಗೆಟ್ಟಿದ್ದು ಸ್ಥಳೀಯರು ನಡೆಸಿದ ಕಲ್ಲು ತೂರಾಟದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಗಾಯಗೊಂಡಿದ್ದಾರೆ, ಜಿಲ್ಲಾಡಳಿತವು ಪ್ರಕ್ಷುಬ್ಧ ಪ್ರದೇಶವಾದ ಬಂಭುಲ್ಪುರ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಿದೆ. ಅಲ್ಲಿಗೆ ಹೋಗುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ವರದಿ ಕೇಳಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತುರ್ತು ಸಭೆಯನ್ನು ಕರೆದಿದ್ದಾರೆ. ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ, ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಮತ್ತು ಎಡಿಜಿ ಎಪಿ ಅಂಶುಮಾನ್ ಸಭೆಯಲ್ಲಿ ಉಪಸ್ಥಿತರಿದ್ದರು. ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯೆಯಾಗಿ ಆಡಳಿತದ ಕ್ರಮವು ಪ್ರದೇಶದಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಧಾಮಿ ಹೇಳಿದ್ದಾರೆ.


