ಉಡುಪಿ : ಮನೆಯ ವರಾಂಡದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರ್ವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೊಟ್ಟು ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಗಾಯಗೊಂಡ ವ್ಯಕ್ತಿ ಬಿಹಾರ ಮೂಲದ ಸುರೇಂದ್ರ (55) ನದಿಯಿಂದ ಮರಳು ತೆಗೆಯುವ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸವಿತಾ ರಾಜೇಶ್ ಎಂಬುವವರ ಮನೆಯ ಜಗುಲಿಯಲ್ಲಿ ಮಲಗಿದ್ದ ಸುರೇಂದ್ರ ಅವರ ಮೇಲೆ ಚಿರತೆ ದಾಳಿ ಮಾಡಿದೆ.
ಸುರೇಂದ್ರ ಅವರ ಕೆನ್ನೆ, ಗಲ್ಲ, ಮುಖಕ್ಕೆ ಗಂಭೀರ ಗಾಯಗಳಾಗಿವೆ. ಕೂಡಲೇ ಅವರನ್ನು ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸುರೇಂದ್ರ ಅವರ ಮೇಲೆ ದಾಳಿ ಮಾಡಿದ ಚಿರತೆ ಅದರ ಮರಿಯೊಂದಿಗೆ ಇತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಲ್ಲೊಟ್ಟು, ಸೊರ್ಪು, ಅಗೋಳಿಬೈಲು, ಪಡವು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ. ಎರಡು ದಿನಗಳ ಹಿಂದೆಯಷ್ಟೇ ಸಂಗೀತಾ ನಾಯ್ಕ ಅವರ ಒಡೆತನದ ಎರಡು ಸಾಕು ನಾಯಿಗಳನ್ನು ಚಿರತೆಯೊಂದು ಬೇಟೆಯಾಡಿತ್ತು.
2023ರ ನವೆಂಬರ್‌ನಲ್ಲಿ ಕಲ್ಲೊಟ್ಟಿನ ದೇವಣ್ಣ ನಾಯಕ್ ಎಂಬುವವರ ಸಾಕು ನಾಯಿಯನ್ನು ಬೇಟೆಯಾಡಿದ ಚಿರತೆ ಮನೆಯ ಮಲ್ಲಿಗೆ ಗಿಡದ ಬಳಿ ಅರ್ಧ ತಿಂದಿದ್ದ ದೇಹವನ್ನು ಬಿಟ್ಟು ಹೋಗಿತ್ತು.