ಉಡುಪಿ : ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಸೇವಕ ಲೀಲಾಧರ ಶೆಟ್ಟಿ ಅವರ ದತ್ತು ಪುತ್ರಿಯ ಗೆಳೆಯ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಶಿರ್ವ ನಿವಾಸಿ ದತ್ತು ಪುತ್ರಿಯ ಗೆಳೆಯ ಗಿರೀಶ್ (20) ಎಂದು ಗುರುತಿಸಲಾಗಿದ್ದು, ಮೂವರು ಸಹಚರರಾದ ಶಿರ್ವ ನಿವಾಸಿಗಳಾದ ರೂಪೇಶ್ (22) ಮತ್ತು ಜಯಂತ್ (23) ಮತ್ತು ಮಜೂರಿನ ಮಹಮ್ಮದ್ ಅಜೀಜ್ ನಾಲ್ವರನ್ನು ಬಂಧಿಸಿದ್ದಾರೆ. ಲೀಲಾಧರ ಶೆಟ್ಟಿ ಅವರ ದತ್ತು ಪುತ್ರಿ ಸಮೇತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಕುಂಬಳೆ ಬಳಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮಕ್ಕಳಾಗದ ಕಾರಣ ಶೆಟ್ಟಿ ದಂಪತಿ 16 ವರ್ಷಗಳ ಹಿಂದೆ ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಡಿ.16ರಂದು ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದು, ನಾಪತ್ತೆಯಿಂದ ಕಂಗಾಲಾದ ಲೀಲಾಧರ ಶೆಟ್ಟಿ ದಂಪತಿ ಅದೇ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮತ್ತು ನಾಪತ್ತೆ ಪ್ರಕರಣದ ಪ್ರಕರಣಗಳು ದಾಖಲಾಗಿವೆ.
ಆರೋಪಿ ಗಿರೀಶ್ ಪೋಕ್ಸೋ, ಅತ್ಯಾಚಾರ ಮತ್ತು ಅಪಹರಣದ ಆರೋಪ ಎದುರಿಸುತ್ತಿದ್ದಾನೆ. ಗಿರೀಶ್ನ ಇತರ ಮೂವರು ಸ್ನೇಹಿತರ ವಿರುದ್ಧವೂ ಪೋಕ್ಸೊ ಪ್ರಕರಣ ದಾಖಲಾಗಿದೆ.
ಎಸ್ಪಿ ಡಾ.ಅರುಣ್ ಕೆ, ಎಎಸ್ಪಿ ಸಿದ್ದಲಿಂಗಪ್ಪ, ಕಾರ್ಕಳ ಡಿವೈಎಸ್ಪಿ ಅರವಿಂದ ಕಲ್ಲಗುಜ್ಜಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಕಾಪು ಪಿಎಸ್ ಐ ಅಬ್ದುಲ್ ಖಾದರ್ ಮತ್ತು ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.


