Saturday, March 7, 2026
Flats for sale
Homeಜಿಲ್ಲೆಉಡುಪಿ : ಖ್ಯಾತ ನಾಗಸ್ವರ ಕಲಾವಿದ ಶೇಖ್ ಜಲೀಲ್ ಸಾಹೇಬ್ ವಿಧಿವಶ.

ಉಡುಪಿ : ಖ್ಯಾತ ನಾಗಸ್ವರ ಕಲಾವಿದ ಶೇಖ್ ಜಲೀಲ್ ಸಾಹೇಬ್ ವಿಧಿವಶ.

ಉಡುಪಿ : ನಾಗಸ್ವರ ವಾದಕ ಸ್ವರ ಸರಸ್ವತಿಯ ವರಪುತ್ರ ಜಲಿಲ್ ಸಾಹೇಬರು ಕಾಪು ಸೀಮೆಯ ಸುಪ್ರಸಿದ್ಧ ಹೊಸ ಮಾರಿಗುಡಿ ದೇವಸ್ಥಾನದ ಜಾತ್ರೆಯ ವೇಳೆ ನಾಗಸ್ವರ ವಾದ್ಯ ಬಾರಿಸುತ್ತಿದ್ದ ಕಾಪು ನಿವಾಸಿ ಶೇಖ್ ಜಲೀಲ್ ಸಾಹೇಬ್ ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ. ಕಾಪು ಸಾವಿರ ಸೀಮೆಯ ದೇವರು ದೈವಗಳು ಕಳೆದ ಐದು ದಶಕಗಳಿಂದ ಇವರ ನಾಗ ಸ್ವರಕ್ಕೆ ಕುಣಿದು ದಣಿದು ತಣಿಯುತ್ತಿದ್ದವು. ಸಜ್ಜನಿಕೆ, ಸರಳತೆ,ಪ್ರಾಮಾಣಿಕತೆ,ವಿನಯಶೀಲತೆ,ದೈವ ಭಕ್ತಿಗಳು ಪರಿಪಾಕ ಗೊಂಡ ಮೂರ್ತ ರೂಪವೇ ಜಲೀಲ್ ಸಾಹೇಬರು.ಅವರನ್ನು ‘ಕೋಮು ಸೌಹಾರ್ದತೆಯ ದ್ಯೋತಕ’ ಎಂದು ಕರೆಯಲಾಗುತ್ತಿತ್ತು.

ದೈವಗಳ ಗಗ್ಗರ ಇಡುವ ಸಮಯದಲ್ಲಿ ಗಂಭೀರ ರಾಗಗಳನ್ನು ನುಡಿಸುತಿದ್ದ ಇವರು ಅದೇ ಕಲ್ಕುಡನ ಜೀಟಿಗೆ ಅವತಾರದ ಸಮಯದಲ್ಲಿ ದುಃಖ ರಸವಿರುವ ಶಿವರಂಜನಿ ಮೊದಲಾದ ರಾಗಗಳನ್ನು ನುಡಿಸುತಿದ್ದರು . ಅವರು ದೈವಾರಾಧನೆಯ ಒಳಗಿರುವ ಸಂಗೀತ ರಸ ಭಾವಗಳ ಆಳ ಅಗಲವನ್ನು ಪರಿಚಯಿಸಿದರು.54 ವರ್ಷದ ವ್ಯಕ್ತಿ ನಾಗಸ್ವರ ವಾದ್ಯದೊಂದಿಗೆ ಮನೆಯಿಂದ ಹೊರಗೆ ಹೋಗಿದ್ದರು. ಹೋಟೆಲ್‌ನಲ್ಲಿ ಚಹಾ ಕುಡಿಯಲು ಕುಳಿತಾಗ ಅವರಿಗೆ ಹೃದಯಾಘಾತವಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಕೊನೆಯುಸಿರೆಳೆದಿದ್ದಾರೆ.

ಜಲೀಲ್ ಸಾಹೇಬ್ ಅವರು ಪತ್ನಿ, ಪುತ್ರಿ, ಸಹೋದರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಜಲೀಲ್ ಸಾಹೇಬರು ಮುಸ್ಲಿಂ ಕುಟುಂಬಕ್ಕೆ ಸೇರಿದವರಾಗಿದ್ದರೂ, ಅವರು ದೇವಸ್ಥಾನದಲ್ಲಿ ಹಿಂದೂ ದೇವರ ಸೇವೆ ಮಾಡುತ್ತಿದ್ದರು. ಅವರು ಕೋಲ ಜಾಹೀರಾತು ಆಶ್ಲೇಷಾ ಬಲಿ ಆಚರಣೆಗಳಲ್ಲಿ ನಾಗಸ್ವರವನ್ನು ನುಡಿಸುತ್ತಿದ್ದರು.ಜಲೀಲ್ ಸಾಹೇಬರಿಗೆ ವಾದ್ಯ ಊದುವುದು ಹೊಟ್ಟೆಪಾಡಿನ ಉದ್ಯೋಗ ಆಗಿರಲಿಲ್ಲ. ಅದನ್ನು ಅವರು ಒಂದು ತಪಸ್ಸಿನಂತೆ ಪಾಲಿಸಿದರು. ದೇವಸ್ಥಾನ ಕೊಟ್ಟಿದ್ದ ಸಣ್ಣ ಉಂಬಳಿ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿದ್ದ ಅವರು ಉತ್ಸವ ಕಾಲದಲ್ಲಿ ದೇವಾಲಯದಲ್ಲೇ ಬೀಡು ಬಿಟ್ಟಿರುತ್ತಿದ್ದರು.

ಜಲೀಲ್ ಸಾಹೇಬರು ತಮ್ಮ ತಂದೆ ಬಾಬನ್ ಸಾಹೇಬ್ ಮತ್ತು ಅಜ್ಜ ಇಮಾಮ್ ಸಾಹೇಬ್ ಅವರಿಂದ ಪಡೆದ ನಾಗಸ್ವರವನ್ನು ನುಡಿಸುವ ಸಂಪ್ರದಾಯವನ್ನು ಮುಂದುವರೆಸಿದರು. ಕಳೆದ 40 ವರ್ಷಗಳಿಂದ ನಾಗಸ್ವರ ನುಡಿಸುತ್ತಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular