ಅನಂತ್ನಾಗ್ : ಕಳೆದ ಲೋಕಸಭೆ ಚುನಾವಣೆಯಲ್ಲಿ ಇನ್ನು ೨೦ ಸ್ಥಾನಗಳು ಇಂಡಿಯಾ ಮೈತ್ರಿಕೂಟಕ್ಕೆ ಬಂದಿದ್ದರೆ ಬಿಜೆಪಿಯ ಹಲವು ನಾಯಕರು ಜೈಲಿನಲ್ಲಿ ಇರುತ್ತಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನಗಳು ಹೆಚ್ಚುವರಿಯಾಗಿ ಇಂಡಿಯಾ ಮೈತ್ರಿಕೂಟಕ್ಕೆ ಬಂದಿದ್ದರೆ ಕೇಂದ್ರದಲ್ಲಿ ನಾವೇ ಅಧಿಕಾರ ಹಿಡಿಯುತ್ತಿದ್ದೆವು, ಆ ಬಳಿಕ ಬಿಜೆಪಿಯ ಹಲವು ಮಂದಿಯನ್ನು ಜೈಲಿಗೆ ಕಳುಹಿಸುತ್ತಿದ್ದೆವು ಎಂದು ಅವರು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅನಂತ್ನಾಗ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ `400 ಪಾರ್’ ಎಂದು ಹೇಳುತ್ತಿದ್ದರು; ನಿಮ್ಮ 400 ಸೀಟುಗಳು ಎಲ್ಲಿವೆ ಎಂದು ಪ್ರಶ್ನಿಸಿದ ಅವರು ೨೪೦ಕ್ಕೆ ಕುಸಿದಿದ್ದಾರೆ. ಇನ್ನೂ 20 ಸ್ಥಾನ ಅವರಿಗೆ ಕಡಿಮೆಯಾಗಿ ಇಂಡಿಯಾ ಮೈತ್ರಿಕೂಟಕ್ಕೆ 20 ಸ್ಥಾನ ಬಂದಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು ಎಂದು ತಿಳಿಸಿದ್ದಾರೆ.
ಐದು ಭರವಸೆ ಜಾರಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್- ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಸರ್ಕಾರ ರಚಿಸಿದರೆ ಐದು ಭರವಸೆ ಈಡೇರಿಸುವುದಾಗಿ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದ್ದಾರೆ. ಮಹಿಳಾ ಉದ್ಯಮಿಗಳಿಗೆ ರೂ 500,೦೦೦ ಬಡ್ಡಿ ರಹಿತ ಸಾಲ, ಮಹಿಳಾ ಕುಟುಂಬದ ಮುಖ್ಯಸ್ಥರಿಗೆ ರೂ 3,೦೦೦, ಪ್ರತಿ ಕುಟುಂಬಕ್ಕೆ ರೂ 25 ಲಕ್ಷ ಆರೋಗ್ಯ ವಿಮೆ, ಪ್ರತಿ ವ್ಯಕ್ತಿಗೆ 11 ಕೆಜಿ ಪಿಡಿಎಸ್ ಧಾನ್ಯಗಳು ಮತ್ತು ಕಾಶ್ಮೀರಿ ಪಂಡಿತರ ಪುನರ್ವಸತಿ
ಕಲ್ಪಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಸರ್ಕಾರ ಯಾವುದೇ ಉತ್ಪಾದನಾ ಘಟಕಗಳನ್ನು ತರುತ್ತಿಲ್ಲ ಎಂದು ಆರೋಪಿಸಿದರು. ‘1 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಬಿಜೆಪಿ ನಿರುದ್ಯೋಗ ಸಮಸ್ಯೆ ಬಹೆಹರಿಸಲು ವಿಫಲವಾಗಿದೆ ಎಂದು ದೂರಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ ಆ ಖಾಲಿ ಹುದ್ದೆಗಳನ್ನು ತುಂಬುತ್ತೇವೆ. ಕಳೆದ ಹಲವು ವರ್ಷಗಳಲ್ಲಿ ಮುಚ್ಚಿದ 4,4೦೦ ಸರ್ಕಾರಿ ಶಾಲೆಗಳನ್ನು ನಾವು ಮತ್ತೆ ತೆರೆಯುತ್ತೇವೆ ಜೊತೆಗೆ ರಾಜ್ಯದ ಸ್ಥಾನ ಮಾನ ಮತ್ತು
ದ್ವಿ-ಸದಸ್ಯ ಶಾಸಕಾಂಗವನ್ನು ಮರುಸ್ಥಾಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ