ಮಂಗಳೂರು : ತಲಪಾಡಿ ರಾಷ್ಟ್ರೀಯ ಹೆದ್ದಾರಿ ಬಳಿ ಡಿ.9ರಂದು ರಾತ್ರಿ ಆರು ಅಂಗಡಿಗಳಿಗೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಅಶ್ರಫ್, ಕುಲದೀಪ್, ಶ್ರೀಧರ್, ಮಹಮ್ಮದ್, ಶಂಕರ್ ಎಂಬುವರಿಗೆ ಸೇರಿದ ಅಂಗಡಿಗಳಲ್ಲಿದ್ದ ಸಾವಿರಾರು ರೂಪಾಯಿ ಬೆಲೆ ಬಾಳುವ ಸಿಗರೇಟ್, ಡ್ರಾಯರ್ ನಲ್ಲಿದ್ದ ನಗದು ಕಳ್ಳತನವಾಗಿದೆ. ಅಶ್ರಫ್ ಎಂಬುವರ ಛಾಯಾಪ್ರತಿ ಅಂಗಡಿಯಲ್ಲಿಟ್ಟಿದ್ದ ಡ್ರಾಯರ್ನಲ್ಲಿದ್ದ ನಗದನ್ನು ಕಳ್ಳರು ಕದ್ದೊಯ್ದಿದ್ದಾರೆ.
ರಾತ್ರಿ ವೇಳೆ ಬೀಗ ಮುರಿದು ಕಳ್ಳರು ಅಂಗಡಿಗಳಿಗೆ ನುಗ್ಗಿದ್ದಾರೆ. ಈ ಹಿಂದೆಯೂ ಮಂಜೇಶ್ವರ ಮತ್ತು ಕುಂಜತ್ತೂರು ಭಾಗದಲ್ಲಿ ಇಂತಹ ಕಳ್ಳತನ ನಡೆದಿತ್ತು. ಗಡಿ ಭಾಗದ ತಲಪಾಡಿಯಲ್ಲಿಯೂ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಇವರೇ ಕಳ್ಳತನದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ರಾತ್ರಿ ಮಾರುತಿ 800 ಕಾರು ಸಂಚರಿಸುತ್ತಿತ್ತು. ಕಾರಿನಲ್ಲಿ ಬಂದ ತಂಡವೇ ಅಂಗಡಿಗಳನ್ನು ದೋಚಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ತಲಪಾಡಿಯಲ್ಲಿ ಪೊಲೀಸರು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ. ಉಳ್ಳಾಲ ಠಾಣೆಯ ಜೀಪು, ಸಬ್ ಇನ್ಸ್ ಪೆಕ್ಟರ್ ವಾಹನ, ಹೆದ್ದಾರಿ ಗಸ್ತು ವಾಹನ, ಹೊಯ್ಸಳ, ಬೀಟ್ ಪೊಲೀಸರ ಬೈಕ್ ಗಳಿದ್ದರೂ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.