ಸೇಂಟ್ ಲೂಸಿಯಾ : ಏಕದಿನ ವಿಶ್ವಕಪ್ನ ಫೈನಲ್ ಸೋಲಿಗೆ ಟೀಂ ಇಂಡಿಯಾ ಸರಿಯಾಗಿ ಸೇಡು ತೀರಿಸಿಸಿಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ ಅಂತಿಮವಾಗಿ 7 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಸೇಂಟ್ ಲೂಸಿಯಾದ ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸೂಪರ್ ಸುತ್ತಿನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಗೆಲುವು ದಾಖಲಿಸಿದೆ. ಇದರೊಂದಿಗೆ ಅಜೇಯ ತಂಡವಾಗಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದೆ.
ಭಾರತದ ಉತ್ತಮ ಬ್ಯಾಟಿಂಗ್
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆಘಾತ ಕೊಟ್ಟಿದ್ದು ವಿರಾಟ್ ಕೊಹ್ಲಿ. ಐದು ಎಸೆತಗಳನ್ನು ಎದುರಿಸಿದ ಅವರು ಶೂನ್ಯಕ್ಕೆ ಔಟಾಗಿ ಬೇಸರ ಮೂಡಿಸಿದರು. ಆದರೆ, ಇನ್ನೊಂದು ಬದಿಯಲ್ಲಿ ಅಬ್ಬರಿಸಿದ ರೋಹಿತ್ ಶರ್ಮಾ ರನ್ ಪೇರಿಸುತ್ತಲೇ ಹೋದರು. ಭಾರತ ಕೇವಲ 29 ಎಸೆತಗಳಲ್ಲಿ 50 ರನ್ ಬಾರಿಸಿದರೆ ಬಳಿಕ ರೋಹಿತ್ ಶರ್ಮಾ 19 ಎಸೆತಕ್ಕೆ ಅರ್ಧ ಶತಕ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ರಿಷಭ್ ಪಂತ್ 14 ಎಸೆತಕ್ಕೆ 15 ರನ್ ಬಾರಿಸಿದರು. ಆದರೆ, ನಂತರ ಆಡಲು ಬಂದ ಸೂರ್ಯಕುಮಾರ್ ಯಾದವ್ ರೋಹಿತ್ ಶರ್ಮಾಗೆ ಉತ್ತಮ ಬೆಂಬಲ ಕೊಟ್ಟರು. ಆದರೆ, ಅವರು 16 ಎಸೆತಕ್ಕೆ 36 ರನ್ ಬಾರಿಸಿ ಔಟಾದರು.
ಸೂರ್ಯ ಔಟಾಗುತ್ತಿದ್ದಂತೆ ಭಾರತದ ಸ್ಕೋರ್ ಗಳಿಕೆ ನಿಧಾನಗೊಂಡಿತು. ಆದಾಗ್ಯೂ ಶಿವಂ ದುಬೆ 1 ಸಿಕ್ಸರ್ ಹಾಗೂ 2 ಫೋರ್ ಸಮೇತ 28 ರನ್ ಬಾರಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಔಟಾಗದೇ 17 ಎಸೆತಕ್ಕೆ 27 ರನ್ ಬಾರಿಸಿದರು. ರವೀಂದ್ರೆ ಜಡೇಜಾ 5 ಎಸೆತಕ್ಕೆ 9 ರನ್ ಬಾರಿಸಿದರು.


