ಉಳ್ಳಾಲ(ಮಂಗಳೂರು)ಡಿ.11 ಸೂಪರ್ ಹಿಟ್ ಕಾಂತಾರ ಚಿತ್ರದ ಗುರುವ ಪಾತ್ರಧಾರಿ ಖ್ಯಾತಿಯ ಸ್ವರಾಜ್ ಶೆಟ್ಟಿಯ ಚಿತ್ರಕಥೆ,ನಿರ್ದೇಶನದೊಂದಿಗೆ ಮ್ಯಾಕ್ಸ್ ಕ್ರಿಯೇಷನ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಕನ್ನಡ ಚಿತ್ರಕ್ಕೆ ಹರೇಕಳ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಭಾನುವಾರ ಮುಹೂರ್ತ ಸಮಾರಂಭ ನೆರವೇರಿತು.

ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ಹೊಸ ಚಿತ್ರಕ್ಕೆ ಕ್ಲಾಫ್ ಮಾಡಿದರು. ತುಳು ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಕ್ಯಾಮರಾ ಚಾಲನೆ ಮಾಡಿದರು.
ಸ್ವರಾಜ್ ಶೆಟ್ಟಿ ಮಾತನಾಡಿ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ.ಕಾಂತಾರ ಚಿತ್ರದ ಗುರುವ ಪಾತ್ರದ ಮೂಲಕ ಕನ್ನಡಿಗರು ನನ್ನನ್ನು ಗುರುತಿಸಿದ್ದಾರೆ.ಹೊಸ ಚಿತ್ರ ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ಪತಿ-ಪತ್ನಿ ನಡುವಿನ ನವಿರಾದ ಪ್ರೇಮಕಥೆಯನ್ನು ಒಳಗೊಂಡಿದೆ.ಮಂಗಳೂರು ಸುತ್ತ,ಮುತ್ತಲಲ್ಲೇ 20-25 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು,ಚಿತ್ರದಲ್ಲಿ “ಕಾಂತಾರ” ಚಿತ್ರದ ಬಹುತೇಕ ಕಲಾವಿದರು ಬಣ್ಣ ಹಚ್ಚಲಿದ್ದಾರೆ ಎಂದರು.
ಸ್ವರಾಜ್ ಶೆಟ್ಟಿಗೆ ನಾಯಕಿಯಾಗಿ ಶಿವಾನಿ ರೈ ಅಭಿನಯಿಸುತ್ತಿದ್ದಾರೆ.ಶಿವಾನಿ ಅವರ ಮೊದಲ ಕನ್ನಡ ಚಿತ್ರ “ಅಭಿರಾಮ ಚಂದ್ರ” ಇನ್ನಷ್ಟೇ ಬಿಡುಗಡೆಯಾಗಲಿದೆ.