Friday, May 9, 2025
Flats for sale
Homeಜಿಲ್ಲೆಸುಬ್ರಹ್ಮಣ್ಯ : ಕುಕ್ಕೆಗೆ ಕಾಡಾನೆ ಬಂದಿದ್ದು ಯಾಕೆ..? ಕುತೂಹಲದ ಕಥೆ ಇಲ್ಲಿದೆ..!

ಸುಬ್ರಹ್ಮಣ್ಯ : ಕುಕ್ಕೆಗೆ ಕಾಡಾನೆ ಬಂದಿದ್ದು ಯಾಕೆ..? ಕುತೂಹಲದ ಕಥೆ ಇಲ್ಲಿದೆ..!

ಮಂಗಳೂರು : ಷಷ್ಠಿ ಸಂಭ್ರಮದಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕಾಡಾನೆಯೊಂದು ಆಗಮಿಸಿ ದೇವಸ್ಥಾನದ ಸುತ್ತಾಮುತ್ತ ಓಡಾಡಿ ಕಾಡಿನಲ್ಲಿ ಕಣ್ಮರೆಯಾಗಿದೆ. ಡಿಸೆಂಬರ್ 1 ರ ರಾತ್ರಿಯಲ್ಲಿ ದಿಢೀರ್ ಎಂಟ್ರಿಕೊಟ್ಟ ಈ ಆನೆಯಿಂದ ಜನರು ಆತಂಕಗೊಂಡಿದ್ದರಾದ್ರೂ ಆನೆ ಯಾರಿಗೂ ತೊಂದರೆ ಮಾಡದೆ, ಒಂದಿಂಚೂ ಹಾನಿ ಮಾಡದೆ ಕಾಡಿನತ್ತ ತಿರುಗಿ ಹೋಗಿದೆ. ಈ ಘಟನೆ ಅಚ್ಚರಿಗೆ ಕಾರಣವಾಗಿದ್ದು ಮಾತ್ರವಲ್ಲದೆ ದೊಡ್ಡದೊಂದು ಚರ್ಚೆಯನ್ನೂ ಹುಟ್ಟು ಹಾಕಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದೇವರಿಗೆ ನಡೆಯುತ್ತಿರುವ ಅಪಚಾರದ ವಿಚಾರ ಈ ಕಾಡನೆ ಭೇಟಿಯ ಬಳಿಕ ಮತ್ತೆ ಚರ್ಚೆಗೆ ಬಂದಿದೆ.

ನಾಗನ ಕ್ಷೇತ್ರಕ್ಕೆ ಬಂದ ನಾಗ(ಗಜ)ರಾಜ…!

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಅಂದ್ರೆ ಅದೊಂದು ನಾಗಕ್ಷೇತ್ರ ಅಂತಾನೇ ಕರೆಯಲ್ಪಡುವ, ಅಸಂಖ್ಯಾತ ಭಕ್ತರ ಸಂಕಷ್ಟ ಪರಿಹರಿಸುವ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದ್ರೆ ನಾಗ ಎಂಬ ಹೆಸರಿನ ಅರ್ಥವನ್ನು ಹುಡುಕುತ್ತಾ ಹೋದಾಗ ನಾಗ ಅಂದರೆ ಆನೆ ಎಂಬುದಾಗಿ ಸಂಸ್ಕೃತ ಸೇರಿದಂತೆ ಭಾರತದ ಪ್ರಾಚೀನ ಜನಭಾಷೆಯಾದ ಪಾಳಿ ಮತ್ತು ಪ್ರಾಕೃತ ಭಾಷೆಯಲ್ಲಿ ಉಲ್ಲೇಖವಿದೆ. ಹೀಗಾಗಿ ಷಷ್ಠಿಯ ಸಂಭ್ರಮದಲ್ಲಿರುವಾಗ ಕ್ಷೇತ್ರಕ್ಕೆ ಈ ನಾಗ(ಗಜ)ರಾಜ ದಿಢೀರ್ ಭೇಟಿ ಕೊಟ್ಟಿರುವುದೇ ವಿಶೇಷ. ಆದ್ರೆ ಈ ವಿಚಾರವಾಗಿ ಹಲವಾರು ವರ್ಷದಿಂದ ಇದ್ದ ಚರ್ಚೆಯೊಂದು ಮತ್ತೆ ಮುನ್ನಲೆಗೆ ಬಂದಿರುವುದು ಸುಳ್ಳಲ್ಲ. ಈ ಚರ್ಚೆ ಆರಂಭವಾಗಿದ್ದು ಕ್ಷೇತ್ರದಲ್ಲಿ 2007ರ ಎಪ್ರಿಲ್ 23 ರಿಂದ 27 ರ ತನಕ ನಡೆದ ಅಷ್ಟಮಂಗಲ ಪ್ರಶ್ನೆಯಿಂದ.

ಸುಬ್ರಹ್ಮಣ್ಯದಲ್ಲಿ ಮೂಲ ಗಣಪತಿ ದೇವರಿಗೆ ಅಪಚಾರ..! ಅಷ್ಟಮಂಗಲದಲ್ಲಿ ಉಲ್ಲೇಖ..!
ಅದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ 2007 ರಲ್ಲಿ ನಡೆದಿದ್ದ ಅಷ್ಠಮಂಗಲ ಪ್ರಶ್ನೆಯಾಗಿದ್ದು, ತ್ರಿಶೂರಿನ ಬೇಳ ಪದ್ಮನಾಭ ಶರ್ಮಾ ,ಚೋರೋಡ್ ನಾರಾಯಣ ಪಣಿಕರ್ ಇವರ ಮುಂದಾಳುತ್ವದಲ್ಲಿ ಈ ಅಷ್ಠಮಂಗಲ ಪ್ರಶ್ನಾ ಚಿಂತನೆ ನಡೆದಿದೆ. ಇದೇ ಪ್ರಶ್ನಾ ಚಿಂತನೆಯಲ್ಲಿ ಕ್ಷೇತ್ರದಲ್ಲಿ ಆಗುತ್ತಿರುವ ಅಪಚಾರಗಳ ಬಗ್ಗೆ ತಿಳಿಸಿ ಸರಿಪಡಿಸಲು ಸಲಹೆಗಳನ್ನು ದೈವಜ್ಞರು ನೀಡಿದ್ದಾರೆ. “ಶೃಂಗೇರಿ ಮಠದ ಸ್ಥಾಪಕಚಾರ್ಯರು ಎಲ್ಲರಿಗೂ ಕ್ಷೇಮಕರವಾದ ಪೂಜಾ ವಿಧಾನವನ್ನು ಆರಂಭಿಸಿದ್ದರು. ಶೃಂಗೇರಿ ಮಠದ ನಿರ್ದೇಶನ ಪ್ರಕಾರವಾಗಿ ಸ್ಥಾನಿಕ ಬ್ರಾಹ್ಮಣ ಪರಂಪರೆಯವರನ್ನು ಇಲ್ಲಿನ ಧರ್ಮಕರ್ತರನ್ನಾಗಿ ನೇಮಿಸಿದ್ದರು. ಕಾಲಾಂತರದಲ್ಲಿ ಇದು ಮಾಧ್ವ ಪರಂಪರೆಗೆ ಬದಲಾಗಿದ್ದು, ಕ್ಷೇತ್ರದ ಆಗ್ನೇಯ ದಿಕ್ಕಿನಲ್ಲಿದ್ದ ಗಣಪತಿ ದೇವರನ್ನು ಸ್ಥಳಾಂತರ ಮಾಡಿ ಅಲ್ಲಿ ನರಸಿಂಹ ದೇವರನ್ನು ಪ್ರತಿಷ್ಠಾಪಿಸಿದ್ದಾಗಿ” ಅಷ್ಟಮಂಗಲದಲ್ಲಿ ಹೇಳಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಗಣಪತಿ ದೇವರ ಕೋಪ ಕ್ಷೇತ್ರಕ್ಕೆ ತಟ್ಟಿರುವುದಾಗಿ ಹೇಳಲಾಗಿತ್ತು. ಇದರ ಜೊತೆಗೆ ಕ್ಷೇತ್ರದ ಪಶ್ಚಿಮ ದಿಕ್ಕಿನಲ್ಲಿ ಇಂಚಾಡಿ ಎಂಬಲ್ಲಿ ಸ್ವತಂತ್ರವಾಗಿ ಪೂಜಿಸಲಾಗುತ್ತಿದ್ದ ನರಸಿಂಹ ದೇವರನ್ನು ಇನ್ನೊಂದು ದೇವರ ಪರಿದಿಯಲ್ಲಿ ಪ್ರತಿಷ್ಠಾಪಿಸಿದಕ್ಕೆ ನರಸಿಂಹ ದೇವರಿಗೂ ಕೋಪ ಇದೆ ಎಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿತ್ತು. ಇದರೊಂದಿಗೆ ಚಂದ್ರಮೌಳಿಶ್ವರ ದೇವರ ಕೋಪ ಕೂಡಾ ಇದೆ ಎಂಬುದಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿತ್ತು.

ಪರಿಹಾರ ಕಾಣದೆ ಸಮಸ್ಯೆಯಾಗಿಯೇ ಉಳಿದ ಅಷ್ಟಮಂಗಲ ಪ್ರಶ್ನೆ
ಅಷ್ಟಮಂಗಲ ಪ್ರಶ್ನೆಯ ಮೂಲಕ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಅರಿತುಕೊಳ್ಳಲಾಗಿದೆಯಾದ್ರೂ 17 ವರ್ಷದಲ್ಲಿ ಇದಕ್ಕೆ ಪರಿಹಾರ ಮಾತ್ರ ಆಗಿಲ್ಲ ಎಂಬ ಅಸಮಾಧಾನ ಅನೇಖ ಭಕ್ತರಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಸಂಪುಟ ನರಸಿಂಹ ಮಠದ ನಡುವೆ ಅನೇಕ ಸಮಯದಿಂದ ಕಿತ್ತಾಟಕ್ಕೂ ಇಲ್ಲಿನ ದೇವರ ಸ್ಥಾನ ಪಲ್ಲಟ ಕಾರಣ ಎಂಬುದಾಗಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ್ರೂ ಅದಕ್ಕೆ ಪರಿಹಾರ ಮಾತ್ರ ಆಗಿಲ್ಲ. ಮೂಲ ಗಣಪತಿ ದೇವರನ್ನು ಮತ್ತೆ ಹಿಂದಿನಂತೆ ಪ್ರತಿಷ್ಠಾಪನೆ ಮಾಡಬೇಕು ಎಂಬ ಭಕ್ತರ ಕೋರಿಕೆ ಇದುವೆಗೂ ಈಡೇರಿಲ್ಲ. ಕ್ಷೇತ್ರದಲ್ಲಿ ಪೂಜಾ ವಿಧಿಗಳನ್ನೂ ಸರಿಪಡಿಸುವ ಕೆಲಸ ಕೂಡಾ ನಡೆದಿಲ್ಲ. ಲಕ್ಷಾಂತರ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳುತ್ತಿದ್ದಾರೆಯಾದ್ರೂ, ಇಲ್ಲಿನ ದೇವರ ಸಮಸ್ಯೆಯನ್ನು ಮಾತ್ರ ಬಗೆಹರಿಸಲಾಗಿಲ್ಲ ಅನ್ನೋದು ಭಕ್ತರ ನೋವು.

ಅಪಚಾರವನ್ನು ನೆನಪಿಸಲು ಕ್ಷೇತ್ರಕ್ಕೆ ಕಾಲಿಟ್ಟನಾ ಗಜರಾಜ..?

ನಾಗ ಅಂದ್ರೆ ಆನೆ ಎಂಬವೂ ಅರ್ಥ ಕೊಡುವ ಕಾರಣ ಕ್ಷೇತ್ರಕ್ಕೆ ಆನೆ ಕಾಲಿಟ್ಟ ವಿಚಾರ ಸಾಕಷ್ಟು ಕುತೂಹಲ ಕೆರಳಿಸಿದೆ. ಕ್ಷೇತ್ರದ ಗಣಪತಿಯನ್ನು ಮೂಲ ಸ್ಥಾನದಲ್ಲಿ ಮರು ಪ್ರತಿಷ್ಠಾಪನೆ ಮಾಡದ ಕಾರಣ ಅದನ್ನು ನೆನಪಿಸಲು ಗಜರಾಜನೇ ಕ್ಷೇತ್ರಕ್ಕೆ ಬಂದನಾ ಎಂಬುದಾಗಿ ಚರ್ಚೆಗಳು ನಡಿತಾ ಇದೆ. ಯಾಕಂದ್ರೆ ಕಾಡಾನೆಯೊಂದು ಜನರಿರುವ ಕ್ಷೇತ್ರಕ್ಕೆ ಬಂದು ಗಲಿಬಿಲಿಗೊಂಡರೂ ಯಾವುದೇ ಹಾನಿ ಮಾಡದೆ ವಾಪಾಸಾಗಿದೆ. ಹೀಗಾಗಿ ಗಜರಾಜನ ಈ ಆಗಮನದ ಹಿಂದೆ ಕ್ಷೇತ್ರದಲ್ಲಿ ಪೂಜಾ ಕಾರ್ಯದಲ್ಲಿ ಹಾಗೂ ಗಣಪತಿ ದೇವರಿಗೆ ಆಗುತ್ತಿರುವ ಅನ್ಯಾಯಕ್ಕಾಗಿ ನ್ಯಾಯ ಕೇಳಲು ಬಂದಿರಬಹುದೇ ಎಂಬ ಚರ್ಚೆಗಳು ಭಕ್ತರಲ್ಲೇ ನಡೆಯುತ್ತಿದೆ. ಸರ್ವರ ಸಮಸ್ಯೆಯನ್ನು ಬಗೆ ಹರಿಸುವ ದೇವರಿಗೇ ಇಂತಹ ಪರಿಸ್ಥಿತಿ ತಂದಿಟ್ಟಿದ್ದು ಯಾರು ? ಯಾಕಾಗಿ ಲಕ್ಷಾಂತರ ಖರ್ಚು ಮಾಡಿ ಅಷ್ಟಮಂಗಲ ಪ್ರಶ್ನೆ ಇಟ್ಟರೂ ಪರಿಹಾರ ಮಾಡಿಲ್ಲ ? ಪರಿಹಾರ ಮಾಡಲು ಇಷ್ಟೊಂದು ವರ್ಷಗಳು ಬೇಕೆ ? ಹೀಗೆ ಹತ್ತಾರು ಪ್ರಶ್ನೆಗಳಿಗೆ ದೇವಸ್ಥಾನದ ಆಡಳಿತ ಉತ್ತರ ನೀಡಬೇಕಾಗಿದೆ. ಭಕ್ತರಿಂದ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುವ ನಂಬರ್ ಒನ್ ದೇವಸ್ಥಾನವಾಗಿ ಭಕ್ತರನ್ನೇ ಅಂಧಕಾರದಲ್ಲಿಟ್ಟು ಅಪಚಾರ ಎಸಗುವುದು ಎಷ್ಟು ಸರಿ ಎನ್ನುವುದೇ ಪ್ರಶ್ನೆ.

RELATED ARTICLES

LEAVE A REPLY

Please enter your comment!
Please enter your name here

Most Popular