ಪುತ್ತೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹಂತಕರಿಗೆ ನೆರವು ನೀಡಿದ ಆರೋಪಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸುಳಿವು ಸಿಕ್ಕಿದೆ ಎಂದು ವರದಿಯಾಗಿದೆ.
ಇವರಲ್ಲಿ ಇಬ್ಬರನ್ನು ಬಂಧಿಸಿ ಭಾರತಕ್ಕೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ನಿಷೇಧಿತ ಪಿಎಫ್‌ಐ ಸದಸ್ಯರಾದ ಮೊಹಮ್ಮದ್ ಮುಸ್ತಫಾ ಎಸ್ ಮತ್ತು ತುಫೈಲ್ ಎಂಎಚ್ ಅವರ ಸುಳಿವು ನೀಡಿದವರಿಗೆ ತಲಾ 5 ಲಕ್ಷ ರೂಪಾಯಿ ಬಹುಮಾನವನ್ನು ಎನ್‌ಐಎ ಘೋಷಿಸಿದೆ.
ಅದೇ ರೀತಿ, ಉಮ್ಮರ್ ಫಾರೂಖ್ ಮತ್ತು ಅಬೂಬಕರ್ ಸಿದ್ದಿಕ್ ಬಗ್ಗೆ ಸುಳಿವು ನೀಡಿದವರಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಷರೀಫ್ ಮತ್ತು ಕೆ ಎ ಮಸೂದ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ತಲೆಮರೆಸಿಕೊಂಡಿರುವ ಆರು ಆರೋಪಿಗಳ ಪೈಕಿ ಐವರನ್ನು ಎನ್‌ಐಎ ಈಗಾಗಲೇ ಬಂಧಿಸಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಆದರೆ, ಈ ಐವರು ಭಾರತದಲ್ಲಿ ಪತ್ತೆಯಾಗಿದ್ದಾರೋ ಅಥವಾ ವಿದೇಶದಲ್ಲಿ ಪತ್ತೆಯಾಗಿದ್ದಾರೋ ಎಂಬುದು ತಿಳಿದು ಬಂದಿಲ್ಲ. ಷರೀಫ್ ಮತ್ತು ಕೆಎ ಮಸೂದ್ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಎನ್‌ಐಎಗೆ ಸುಳಿವು ಸಿಕ್ಕಿದ್ದು, ಅವರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ಮತ್ತೊಬ್ಬ ಆರೋಪಿ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.