ಶಿವಮೊಗ್ಗ : “ಮನೆಯೊಂದರ ಮುಂಭಾಗ ಅಮಾವ್ಯಾಸೆ ದಿನದ ರಾತ್ರಿಯಂದು, ಕಿಡಿಗೇಡಿಗಳ ತಂಡವೊಂದು ವಾಮಾಚಾರ ನಡೆಸಿ ಕುಟುಂಬದವರಲ್ಲಿ ಭೀತಿ ಉಂಟು ಮಾಡಲೆತ್ನಿಸಿದ ಘಟನೆ, ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಂಜ ಎಂಬುವರ ಮನೆಯ ಬಳಿ ವಾಮಾಚಾರ ನಡೆಸಲಾಗಿದೆ. ಡಿಸೆಂಬರ್ 1 ರ ಅಮಾವ್ಯಾಸೆ ತಡ ರಾತ್ರಿ ಮಾಟಮಂತ್ರ ಮಾಡಲಾಗಿದ್ದು, ಈ ವೇಳೆ ಮಂಜ ದಂಪತಿ ಹೊರ ಜಿಲ್ಲೆಯ ದೇವಾಲಯವೊಂದಕ್ಕೆ ತೆರಳಿದ್ದರು. ಮನೆಯಲ್ಲಿ ಅವರ ಇಬ್ಬರು ಮಕ್ಕಳು ಇದ್ದರು ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಮೊಟ್ಟೆಗಳು, ಮೀನುಗಳು, ಮಣ್ಣಿನಿಂದ ಮಾಡಿದ ಗೊಂಬೆಗಳು, ತೆಂಗಿನಕಾಯಿ, ಬಾಳೆಹಣ್ಣು, ಅರಿಶಿಷಣ, ಕುಂಕುಮ, ಲಿಂಬೆಹಣ್ಣು ಸೇರಿದಂತೆ ಮತ್ತೀತರ ಪೂಜಾ ಸಾಮಗ್ರಿ ಹಾಗೂ ಇನ್ನಿತರ ವಸ್ತುಗಳನ್ನು ಇಟ್ಟಿರುವುದು ಕಂಡುಬಂದಿದೆ .
ಸದರಿ ಘಟನೆಯಿಂದ ಕುಟುಂಬದವರು ಹಾಗೂ ಸುತ್ತಮುತ್ತಲಿನ ಮನೆಗಳ ನಿವಾಸಿಗಳನ್ನು ಆತಂಕಿತರನ್ನಾಗಿಸಿದೆ. ವಾಮಾಚಾರ ನಡೆಸಿ ಭೀತಿ ಉಂಟು ಮಾಡಲು ಮುಂದಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


