ಮುಂಬೈ : ಮುಂಬೈ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಚಲನಚಿತ್ರದ ಶೂಟಿಂಗ್ ನಡೆಯುತ್ತಿರುವ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಶೂಟಿಂಗ್ ಸ್ಥಳಕ್ಕೆ ಒಳನುಗ್ಗಿ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಹೇಳಿ ಬಹಿರಂಗವಾಗಿ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮುಂಬೈ ನ ದಾದರ್ ಪ್ರದೇಶದಲ್ಲಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಸೆಟ್‌ನಲ್ಲಿ ಇರುವುದು ಚಿತ್ರ ತಂಡದ ಗಮನಕ್ಕೆ ಬಂದಿದೆ. ಸ್ವಲ್ಪ ಸಮಯದ ನಂತರ, ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ, ಆತನಿಂದ ಯಾವುದೇ ಸಮಂಜಸ ಉತ್ತರ ದೊರೆತಿಲ್ಲ. ಕೊನೆಗೆ ಅವನನ್ನು ಸೆಟ್‌ನಿಂದ ಹೊರಗೆ ಹೋಗುವಂತೆ ಹೇಳಲಾಗಿದೆ ಆಗ ಆತ ನೇರವಾಗಿ ಲಾರೆನ್ಸ್ ಬಿಷ್ಣೋಯ್ ಹೆಸರು ಹೇಳಿ ಬೆದರಿಕೆ ಹಾಕಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ.
ಬಿಷ್ಣೋಯಿ ಕೋ ಬುಲೌನ್ ಕ್ಯಾ?’ ಎಂದು ಧಮ್ಕಿ ಹಾಕಿದ್ದಾನೆ. ಇದನ್ನೆಲ್ಲಾ ಗಮನಿಸಿದ ಸೆಟ್‌ನಲ್ಲಿದ್ದವರು ತಕ್ಷಣ ಎಚ್ಚೆತ್ತ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೋಲೀಸರು ಸಂಬಂಧ ಪಟ್ಟ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಆತನನ್ನು ಶಿವಾಜಿ ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ದು ಕೂಲಂಕುಷವಾಗಿ ವಿಚಾರಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಕಳೆದ ಕೆಲವು ತಿಂಗಳುಗಳಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿAದ ಸತತವಾಗಿ ಬೆದರಿಕೆಗಳು ಬರುತ್ತಿವೆ.
ಮುಂಬೈ ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಂದ ನಂತರ, ಸಲ್ಮಾನ್ ಖಾನ್ ಅವರಿಗೆ ಬಿಷ್ಣೋಯ್ ಗ್ಯಾಂಗ್ ನಿಂದ ಕೊಲೆ ಬೆದರಿಕೆಗಳು ಹೆಚ್ಚಾಗಿವೆ.