ಮಂಗಳೂರು : ಮಂಗಳೂರು ನಗರಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರುಹಾಗೂ ಕೇರಳ ರಾಜ್ಯಕ್ಕೆ ಬೃಹತ್ ಪ್ರಮಾಣದಲ್ಲಿ ಮಹೇಂದ್ರ XUV 500 ಕಾರಿನಲ್ಲಿ ನಿಷೇದಿತ ಮಾದಕ ವಸ್ತುವಾದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಹಚ್ಚಿ 132 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಈ ಅಕ್ರಮ ಗಾಂಜಾ ಸಾಗಾಟದ ಸಮಯದಲ್ಲಿ ಪೊಲೀಸರು ಅಥವಾ ಸಾರ್ವಜನಿಕರು ನಿಲ್ಲಿಸಿದ್ದಲ್ಲಿ ಅವರಿಗೆ ತೊಂದರೆ ನೀಡುವ ಉದ್ದೇಶದಿಂದ ತಲವಾರುಗಳನ್ನು ಕಾರಿನಲ್ಲಿ ಇರಿಸಿದ್ದರು. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಆರೋಪಿಗಳ ಪೈಕಿ ರಮೀಝ್ ರಾಝ್ ಎಂಬಾತನ ವಿರುದ್ಧ ಈ ಹಿಂದ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ದ್ರವ್ಯ ಸೇವನೆಗೆ ಸಂಬಂಧಪಟ್ಟಂತೆ ಒಂದು ಪ್ರಕರಣ, ಗಾಂಜಾ ಮಾರಾಟ ಮಾಡಿದ ಪ್ರಕರಣ, ಹಲ್ಲೆ ಪ್ರಕರಣ ಹೀಗೆ ಒಟ್ಟು 3 ಪ್ರಕರಣ ದಾಖಲಾಗಿರುತ್ತದೆ. ಅಲ್ಲದೇ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಒಂದು ಪ್ರಕರಣ ಹಾಗೂ ಕೊಲೆ ಯತ್ನ ಪ್ರಕರಣ ಮತ್ತು ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟದ ಒಂದು ಪ್ರಕರಣ ಹೀಗೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ಅಬ್ದುಲ್ ಖಾದರ್ ಹ್ಯಾರಿಸ್ ಎಂಬಾತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ ಹಾಗೂ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.