ಮಂಗಳೂರು ; ಫೆಬ್ರವರಿ 11 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ತೂರು ತಾಲೂಕಿನ ಈಶ್ವರಮಂಗಲ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಈಶ್ಚರಮಂಗಲದಲ್ಲಿರುವ ಹನುಮಗಿರಿ ಆಂಜನೇಯ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಅಮರಗಿರಿ’ ಮಂದಿರದ ಲೋಕಾರ್ಪಣೆ ಮಾಡಲಿದ್ದಾರೆ.
ಹನುಮಗಿರಿಯಲ್ಲಿ ಈಗಾಗಲೇ ರಾಮಾಯಣದ ಸಂಪೂರ್ಣ ಮಾಹಿತಿ ಇರೋ ಕಲ್ಲಿನ ಕೆತ್ತನೆಗಳಿದ್ದು ಸಾಕಷ್ಟು ಪ್ರವಾಸಿಗರನ್ನು ಸೆಳೆಯುತ್ತಿದೆ. ಇದೀಗ ಅಮರಗಿರಿ ಮೂಲಕ ಸಮಗ್ರ ಭಾರತ ದರ್ಶನದ ಪರಿಚಯ ನೀಡುವ ಶಿಲ್ಪಗಳು ಹಾಗೂ ಚಿತ್ತಾರಗಳನ್ನು ಇಲ್ಲಿ ನಿರ್ಮಿಸಲಾಗಿದೆ.
ಶ್ರೀ ಭಾರತೀ ಅಮರ ಜ್ಯೋತಿ ಮಂದಿರದ ಬಳಿಕ ಭಾರತಾಂಬೆಯನ್ನು ಕೊಂಡಾಡುವ ’ವಂದೇ ಮಾತರಂ’ ಶಿಲಾ ಫಲಕ ದರ್ಶನ. ಫಲಕದ ಹಿಂದೆ ಯೋಧನ ಪ್ರತಿಮೆ. ಗಿರಿಯನ್ನು ಇಳಿಯುತ್ತಾ ಬರುತ್ತಿದ್ದಂತೆ ಭವ್ಯ ಭಾರತದ ರಕ್ಷಣಾ ವ್ಯವಸ್ಥೆಯನ್ನು ನೆನಪಿಸುವಂತ ದೃಶ್ಯ ಇಲ್ಲಿ ಸೃಷ್ಟಿಸಲಾಗಿದೆ.
ಅಷ್ಟಭುಜಾಕೃತಿಯ ಆಲಯವನ್ನು ನಿರ್ಮಾಣ ಮಾಡಿದ್ದು ಅದರ ಒಳಭಾಗದಲ್ಲಿ ’ಭಾರತ ಮಾತೆ’ಯ ಆರಡಿ ಎತ್ತರದ ಅಮೃತಶಿಲೆಯ ವಿಗಹ, ಹಿಂದೆ ಅಖಂಡ ಭಾರತದ ಚಿತ್ತಾರದಲ್ಲಿ ಆಂಜನೇಯ ಮತ್ತು ಪಾರ್ವತೀ ಪರಮೇಶ್ವರ, ಭಾರತಮಾತೆಯ ಎಡ, ಬಲಗಳಲ್ಲಿ ಮೂರಡಿ ಎತ್ತರದ ರೈತ ಮತ್ತು ಯೋಧರ (ಜೈ ಜವಾನ್, ಜೈ ಕಿಸಾನ್) ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಸುಮಾರು ನೂರು ಮಂದಿ ಕುಳಿತುಕೊಳ್ಳಬಹುದಾದಷ್ಟು ವಿಶಾಲ ಸ್ಥಳವನ್ನು ಅಷ್ಟಭುಜಾಕೃತಿಯ ಆಲಯ ಹೊಂದಿದೆ.
ಫೆಬ್ರವರಿ 11 ರಂದು ಜಿಲ್ಲೆಗೆ ಆಗಮಿಸುವ ಗೃಹ ಸಚಿವ ಅಮಿತ್ ಷಾ ಈಶ್ವರಮಂಗಲಕ್ಕೆ ತೆರಳಿ ಹನುಮಗಿರಿಯಲ್ಲಿನ ಅಮರಗಿರಿ ಮಂದಿರದ ಅಷ್ಟಭುಜಾಕೃತಿಯ ಆಲಯದೊಳಗೆ ಇರುವ ಭಾರತಾಂಬೆಗೆ ಪುಷ್ಪಾರ್ಚನೆ ನಡೆಸಿ ದೀಪ ಬೆಳಗುವ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ. ಸುಮಾರು 20 ರಿಂದ 30 ನಿಮಿಷಗಳ ಕಾಲ ಈ ಭಾಗದಲ್ಲಿ ಷಾ ಇರಲಿದ್ದಾರೆ