ಹಾಸನ ; ಭಾನುವಾರ ಹವಾನಿಯಂತ್ರಣದ ಸ್ಟೆಬ್ಲಿಲೈಸರ್ ಸ್ಫೋಟಗೊಂಡಾಗ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಎಚ್ಐಎಂಎಸ್) ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ 24 ಶಿಶುಗಳನ್ನು ರಕ್ಷಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಈಗ ಶಿಶುಗಳು ಸುರಕ್ಷಿತವಾಗಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ಭಾನುವಾರ ಮಧ್ಯಾಹ್ನ ಸ್ಟೆಬಿಲೈಸರ್ ಸ್ಫೋಟಗೊಂಡಿದ್ದರಿಂದ ವಾರ್ಡ್ನಲ್ಲಿ ಹೊಗೆ ತುಂಬಿತ್ತು, ಕೆಲಕಾಲ ವಾರ್ಡ್ನಲ್ಲಿ ಆತಂಕ ಹರಡಿತು.
ನರ್ಸ್ಗಳು ಮತ್ತು ಇತರರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಿಟಕಿಯ ಗಾಜುಗಳನ್ನು ಒಡೆದು ವಾರ್ಡ್ನಲ್ಲಿದ್ದ ಎಲ್ಲಾ ಶಿಶುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ದೊಡ್ಡ ಅನಾಹುತವನ್ನು ತಪ್ಪಿಸಿದರು. ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಕೃಷ್ಣಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಹವಾನಿಯಂತ್ರಣದ ಸ್ಟೆಬಿಲೈಸರ್ ಸ್ಫೋಟಗೊಂಡು ಹೊಗೆ ವಾರ್ಡ್ನಲ್ಲಿ ತುಂಬಿಕೊಂಡಿದೆ ಎಂದು ಎಚ್ಐಎಂಎಸ್ ಮಕ್ಕಳ ತಜ್ಞ ಡಾ.ಮನುಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. “ಒಟ್ಟಾರೆಯಾಗಿ, ವಾರ್ಡ್ನಲ್ಲಿದ್ದ 24 ಶಿಶುಗಳನ್ನು ಆಸ್ಪತ್ರೆಯ ಸಿಬ್ಬಂದಿ ತಕ್ಷಣ ಮತ್ತೊಂದು ವಾರ್ಡ್ಗೆ ಸ್ಥಳಾಂತರಿಸಿದರು. ಹೊಗೆಯನ್ನು ತೆರವುಗೊಳಿಸಿದ ನಂತರ, ಶಿಶುಗಳನ್ನು ಮತ್ತೆ ಐಸಿಯುಗೆ ಸ್ಥಳಾಂತರಿಸಲಾಯಿತು ಮತ್ತು ಎಲ್ಲರೂ ಸುರಕ್ಷಿತವಾಗಿದ್ದಾರೆ. ಇದು ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಎಲ್ಲಾ ಶಿಶುಗಳನ್ನು ವೈದ್ಯರು ಪರೀಕ್ಷಿಸಿ ಅವರ ಪೋಷಕರಿಗೆ ತೋರಿಸಿದ್ದಾರೆ. ಗಾಬರಿಯಾಗುವ ಅಗತ್ಯವಿಲ್ಲ,” ಎಂದರು.


