ಹೈದರಾಬಾದ್ : ಬೆಳ್ಳಂಬೆಳಗ್ಗೆ ಚಿಕ್ಕಡಪಳ್ಳಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಸಂಧ್ಯಾ ಥಿಯೇಟರ್ ನೂಕುನುಗ್ಗಲು ಪ್ರಕರಣದಲ್ಲಿ ಅಲ್ಲು ಅರ್ಜುನ್‌ರನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸರು ಅರ್ಜಿ ಸಲ್ಲಿಸಿದ್ದರು. ನಾಂಪಲ್ಲಿ ನ್ಯಾಯಾಲಯ ಇದರ ವಿಚಾರಣೆ ನಡೆಸಿತು. ಬನ್ನಿಯನ್ನು ರಿಮಾಂಡ್‌ಗೆ ಕಳುಹಿಸುವಂತೆ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಅಲ್ಲು ಅರ್ಜುನ್ ನ್ಯಾಯಾಂಗ ಬಂಧನ ವಿಧಿಸಿದೆ.
ಕೋರ್ಟ್ ಆದೇಶದ ಬೆನ್ನಲ್ಲೇ ಅಲ್ಲು ಅರ್ಜುನ್ ಅವರನ್ನು ಚಂಚಲಗೂಡ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.ಇದರ ನಡುವೆ, ಹೈಕೋರ್ಟ್‌ನಲ್ಲಿ ಅಲ್ಲು ಅರ್ಜುನ್ ಕ್ವಾಷ್ ಅರ್ಜಿ ಸಲ್ಲಿಸಿದ್ದಾರೆ. ತಮ್ಮನ್ನು ಬಂಧಿಸಲು ಪೊಲೀಸರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣಗಳನ್ನು ರದ್ದುಗೊಳಿಸುವಂತೆ ಬನ್ನಿ ಪರ ವಕೀಲರು ಹೈಕೋರ್ಟ್‌ನಲ್ಲಿ ಕ್ವಾಷ್ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದ ತೀರ್ಪು ಬರಲಿದೆ ಎಂಬ ಮಾಹಿತಿ ದೊರೆತಿದೆ.
ಡಿ. 4 ರಂದು ‘ಪುಷ್ಪ 2’ ಸಿನಿಮಾ (Pushpa 2) ಬಿಡುಗಡೆ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಒರ್ವ ಮಹಿಳೆ ನಿಧನ ಹೊಂದಿದ್ದರು. ಅವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದರು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿತ್ತು.ಪ್ರಕರಣ ಕುರಿತು ಈ ಮೊದಲೇ ಹೈದರಾಬಾದ್, ಚಿಕ್ಕಡಪಲ್ಲಿ ಪೊಲೀಸರು ನೊಟೀಸ್ ನೀಡಿದ್ದರು. ಈ ನೋಟಿಸಿಗೆ ಅಲ್ಲು ಅರ್ಜುನ್ ಉತ್ತರ ನೀಡಿರಲಿಲ್ಲ ಎನ್ನಲಾಗಿದೆ. ಆದರೆ ಅಲ್ಲು ಅರ್ಜುನ್ ಈ ಪ್ರಕರಣವನ್ನು ರದ್ದು ಮಾಡುವಂತೆ ತೆಲಂಗಾಣ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ನಾಂಪಲ್ಲಿ ನ್ಯಾಯಾಲಯ ಬನ್ನಿಯನ್ನು ಪೊಲೀಸ್ ರಿಮಾಂಡ್‌ಗೆ ಕಳುಹಿಸುವಂತೆ ಆದೇಶ ಹೊರಡಿಸಿರುವುದು ಸಂಚಲನ ಮೂಡಿಸಿದೆ. ಇದರಿಂದ ಈ ಪ್ರಕರಣ ಈಗ ತೆಲುಗು ರಾಜ್ಯಗಳಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ 11ನೇ ಆರೋಪಿಯಾಗಿ ಪೊಲೀಸರು ದಾಖಲಿಸಿದ್ದಾರೆ ಎನ್ನಲಾಗಿದೆ.