ಮಂಗಳೂರು, ಡಿ.24: ಹೊರರಾಜ್ಯ ವಿದ್ಯಾರ್ಥಿಗಳು ತೆರಳುತ್ತಿದ್ದ ಸ್ಕೂಟರ್ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಕಾರು ಚಾಲಕನನ್ನು ಸ್ಥಳೀಯರು ಹಿಡಿದಿದ್ದಾರೆ. ತಲಪಾಡಿ ದೇವಿನಗರದಲ್ಲಿ ಈ ಘಟನೆ ನಡೆದಿದೆ.
ನಗರದ ದಕ್ಷಿಣ ಸಂಚಾರ ಪೊಲೀಸರು ಕೇರಳ ನೋಂದಣಿ ಸಂಖ್ಯೆಯ ಕಾರನ್ನು ಜಪ್ತಿ ಮಾಡಿ ಚಾಲಕ ಅಹಮದ್ ಮುಬಾರೀಶ್‌ನನ್ನು ಬಂಧಿಸಿದ್ದಾರೆ.
ಶುಕ್ರವಾರ ಸಂಜೆ ಅಹ್ಮದ್ ಮಂಗಳೂರಿನಿಂದ ಕೇರಳಕ್ಕೆ ತನ್ನ ಕಾರನ್ನು ಅತಿವೇಗದಲ್ಲಿ ಚಲಾಯಿಸುತ್ತಿದ್ದ. ಈತ ಕೋಟೆಕಾರ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸೆಟಿದ್ ಬಶಾಂಗ್ (30) ಮತ್ತು ಪಿಲಿಯನ್ ಅಲಿ ಸಾಗರ್ (30) ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಅಲಿ ಸಾಗರ್ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಆಗಿದ್ದರೆ, ಬಶಾಂಗ್ ಇಂಡಿಯಾನಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
ಸವಾರ ಮತ್ತು ಪಿಲಿಯನ್ ಇಬ್ಬರೂ ವಿದೇಶಿ ಪ್ರಜೆಗಳಾಗಿದ್ದು, ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾರೆ ಮತ್ತು ದೇರಳಕಟ್ಟೆಯ ಲಾಡ್ಜ್‌ನಲ್ಲಿ ವಾಸಿಸುತ್ತಿದ್ದಾರೆ.
ಕಾರಿನ ಚಾಲಕ ಅಹಮದ್ ತನ್ನ ಜೊತೆಯಲ್ಲಿದ್ದ ಬಾಲಕಿಯನ್ನು ತಲಪಾಡಿಯಲ್ಲಿ ಇಳಿಸಿ ನಂತರ ದೇವಿಪುರ ಒಳರಸ್ತೆ ಮೂಲಕ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಸ್ಥಳೀಯರು ಆತನನ್ನು ವಾಹನಗಳಲ್ಲಿ ಹಿಂಬಾಲಿಸಿ ದೇವಿಪುರ ಮಂಡೆಕಟ್ಟಾ ಬಳಿ ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ.