ಬೆಳ್ತಂಗಡಿ : ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ಸೊಂದು ರಸ್ತೆ ಬಿಟ್ಟು ಪೊದೆಯೊಂದರಲ್ಲಿ ಬಿದ್ದಿದೆ. ಅಪಘಾತದಲ್ಲಿ ಹಲವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬೆಳ್ತಂಗಡಿ ತಾಲೂಕಿನ ಉಳ್ಳಾಲ್ತಿಕಟ್ಟೆ ಬಳಿ ರ್ಘಟನೆ ನಡೆದಿದೆ.
ಬಸ್ ನಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನಿಂದ ಶಬರಿಮಲೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳು ಇದ್ದರು ಎನ್ನಲಾಗಿದೆ. ಬಸ್ಸಿನಲ್ಲಿ ಒಟ್ಟು 21 ಮಂದಿ ಪ್ರಯಾಣಿಕರಿದ್ದರು. ಬ್ರೇಕ್ ವೈಫಲ್ಯವೇ ಅವಘಡಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಅಪಘಾತ ಸಂಭವಿಸಿದ ಸ್ಥಳವು ಅಪಾಯಕಾರಿ ಕೆಳಮುಖ ಇಳಿಜಾರಾಗಿದ್ದು, ಬಸ್‌ನ ಚಾಲಕನು ಬುದ್ದಿ ತೋರಿಸಿ ರಸ್ತೆ ಬದಿಯ ಪೊದೆಗೆ ಓಡಿಸಿದನು. ಒಂದೆಡೆ ಆಳವಾದ ಕಂದರ, ಇನ್ನೊಂದೆಡೆ ವಿದ್ಯುತ್ ಕಂಬ. ಸಣ್ಣಪುಟ್ಟ ತಪ್ಪಾದರೂ ದೊಡ್ಡ ದುರಂತಕ್ಕೆ ಕಾರಣವಾಗುತ್ತಿತ್ತು.
ಮುಂಡಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಗಣೇಶ ಬಂಗೇರ, ಜಗದೀಶ್ ನಾಯ್ಕ್, ಸಮಾಜ ಸೇವಕ ಸಚಿನ್ ಭಿಡೆ ಸೇರಿದಂತೆ ಸ್ಥಳೀಯರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ನಾಲ್ಕು ಆಂಬುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರ ಪೊಲೀಸರು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.