ಕೇರಳ: ಸ್ಟೆಪ್ ಅಂತೂ ಸೂಪರು , ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಪೈಕಿ ಮದುವೆ ವಿಡಿಯೋಗಳು ನೋಡುಗರ ಗಮನ ಸೆಳೆಯುತ್ತವೆ. ಅದೇ ರೀತಿಯ ಮತ್ತೊಂದು ಮದುವೆ ವಿಡಿಯೋ ಸದ್ಯ ಸಖತ್ ಸೌಂಡ್ ಮಾಡುತ್ತಿದೆ. ಈ ವಿಡಿಯೋದಲ್ಲಿ ಮದುಮಗಳು ಖುಷಿ ಖುಷಿಯಿಂದ ಭರ್ಜರಿಯಾಗಿ ಚಂಡೆ ಬಾರಿಸಿದ್ದಾಳೆ.
ಹೌದು, ಕೇರಳದ ವಧು ತನ್ನ ಮದುವೆಯ ದಿನದಂದು ವೇದಿಕೆಗೆ ಏರುವ ಮೊದಲು ಶಿಂಕಾರಿ ಮೇಳಂ ಕಲಾವಿದರೊಂದಿಗೆ ಚೆಂಡೆ (ತಾಳವಾದ್ಯ) ಬಾರಿಸುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾಳೆ. ಕೇರಳದ ಸಾಂಪ್ರದಾಯಿಕ ಆರ್ಕೆಸ್ಟ್ರಾ ಎಂದೇ ಕರೆಯಲ್ಪಡುವ ಚೆಂಡ ಮೇಳವನ್ನು ಸಾಮಾನ್ಯವಾಗಿ ರಾಜ್ಯದಲ್ಲಿ ಅದ್ಧೂರಿ ವಿವಾಹಗಳಲ್ಲಿ ಕಾಣಬಹುದು. ಆದರೆ ತನ್ನ ಮದುವೆಯಲ್ಲಿ ಸ್ವತಃ ಚೆಂಡೆ ನುಡಿಸುವ ಮೂಲಕ ವಧು ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಮದುವೆ ದಿನ ಫುಲ್ ಜೋಶ್‍ನಲ್ಲಿ ಕಂಡುಬಂದ ವಧು ತನ್ನ ಕೊರಳಿಗೆ ಚೆಂಡೆವಾದ್ಯವನ್ನು ಹಾಕಿಕೊಂಡು ಖುಷಿ ಖುಷಿಯಿಂದಲೇ ಭರ್ಜರಿಯಾಗಿ ಚೆಂಡೆ ಬಾರಿಸಿದ್ದಾಳೆ. ಕೆಂಪು ಸೀರೆ ಧರಿಸಿರುವ ವಧು ಇತರ ಕಲಾವಿದರ ಮಧ್ಯದಲ್ಲಿ ನಿಂತು ಚೆಂಡೆ ನುಡಿಸಿದ್ದಾಳೆ. ಮದುವೆಗೆ ಬಂದಿದ್ದ ಸಂಬಂಧಿಕರು ಮತ್ತು ಸ್ನೇಹಿತರು ಈ ದೃಶ್ಯವನ್ನು ಹರ್ಷಚಿತ್ತದಿಂದ ನೋಡುತ್ತಾ ವಧುವಿನ ಉತ್ಸಾಹಕ್ಕೆ ತಲೆದೂಗಿದ್ದಾರೆ. ಈ ವೇಳೆ ವಧುವಿಗೆ ಆಕೆಯ ತಂದೆ ಮತ್ತು ವರ ಸಾಥ್ ನೀಡಿದ್ದಾರೆ.
ಅಂದಹಾಗೆ ಚೆಂಡೆ ನುಡಿಸಿದ ವಧುವಿನ ಹೆಸರು ಶಿಲ್ಪಾ. ಈಕೆ ತರಬೇತಿ ಪಡೆದ ಚೆಂಡೆ ಕಲಾವಿದೆಯಂತೆ. ಕಣ್ಣೂರಿನ ವರ ದೇವಾನಂದ್ ಜೊತೆಗೆ ಶಿಲ್ಪಾರ ಮದುವೆ ತ್ರಿಶೂರಿನ ಗುರುವಾಯೂರು ದೇವಸ್ಥಾನದಲ್ಲಿ ನಡೆಯಿತು. ಶಿಲ್ಪಾ ಳೆದ 8 ವರ್ಷಗಳಿಂದ ಪಾಂಡಿ ಮೇಳಂ, ಪಂಚರಿ ಮೇಳಂ ಮತ್ತು ಶಿಂಕಾರಿ ಮೇಳಂನಲ್ಲಿ ತರಬೇತಿ ಪಡೆದಿದ್ದಾರೆ. ಇದಲ್ಲದೆ ಅವರು ಯುಎಇಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ಸಹ ನೀಡಿದ್ದಾರಂತೆ.