ಬೆಂಗಳೂರು : ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುವುದೇ ವಿರಳವಾಗಿದೆ. ಅದರಲ್ಲೂ ಕನ್ನಡ ಸಿನಿಮಾಗಳಿಗೆ ಇನ್ನೂ ಕ್ಷೀಣ. ಹೀಗಾದರೆ ಒಬ್ಬರ ಹಿಂದೊಬ್ಬರು ಚಿತ್ರಮಂದಿರಗಳನ್ನು ಮುಚ್ಚಿಕೊಂಡು ಹೋಗಬೇಕಾಗುತ್ತದೆ ಎಂದು ಪ್ರದರ್ಶಕರು ನೋವು ವ್ಯಕ್ತಪಡಿಸುತ್ತಲೇ ಇದ್ದರು. ಅವರ ಬೇಸರವನ್ನು ಭೈರತಿ ರಣಗಲ್ ಸಿನಿಮಾ ಕೊಂಚ ನೀಗಿಸಿದೆ. ಕಳೆದ ವಾರ ರಿಲೀಸ್ ಆದ ಭೈರತಿ ಅನೇಕ ಕಡೆ ಹೌಸ್‌ಫುಲ್ ಶೋಗಳನ್ನು ಕಂಡಿದೆ.
ಅದನ್ನು ಸಾಕ್ಷೀಕರಿಸುವುದಕ್ಕೆಂದೇ ಈ ಚಿತ್ರದ ವಿತರಕ ಜಗದೀಶ್, ಮೈಸೂರಿನ ಗಾಯತ್ರಿ ಚಿತ್ರಮಂದಿರ, ಬೆಂಗಳೂರಿನ ವೀರೇಶ್, ನರ್ತಕಿ ಥಿಯೇಟರ್‌ಗೆ ಸಂಬAಧಿಸಿದವರು ಭೈರತಿ ರಣಗಲ್ ಚಿತ್ರದ ಸಂತೋಷಕೂಟಕ್ಕೆ ಆಗಮಿಸಿದ್ದರು. ರಣಗಲ್ ಸಿನಿಮಾಗೆ ಪ್ರೇಕ್ಷಕರು ಕುಟುಂಬ ಸಮೇತರಾಗಿ ಆಗಮಿಸುತ್ತಿರುವುದನ್ನು ನೋಡುವುದೇ ಖುಷಿ ಎನ್ನುವುದು ಅವರ ಅನಿಸಿಕೆ. ಎರಡನೇ ವಾರದಿಂದ ಇನ್ನೊಂದಷ್ಟು ಸೆಂಟರ್‌ಗಳಲ್ಲಿ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳಲಿದ್ದಾನಂತೆ ಭೈರತಿ.
ಈ ಚಿತ್ರವನ್ನು ನಿರ್ಮಾಣ ಮಾಡಿರುವುದು ಗೀತಾ ಶಿವರಾಜ್‌ಕುಮಾರ್. ತಮ್ಮ ಸಂಸ್ಥೆಯಿಂದ ತೆರೆಕಂಡ ಎರಡನೇ ಚಿತ್ರಕ್ಕೆ ಈ ಮಟ್ಟದ ಜನಮನ್ನಣೆ ದೊರೆತಿರುವುದರಿಂದ, ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಲು ಪ್ರೇರಣೆ ಸಿಕ್ಕಂತಾಗಿದೆ ಎನ್ನುವುದು ಗೀತಾ ಅವರ ಅಭಿಪ್ರಾಯ. ಈ ಗೆಲುವಿನ ಹಿಂದೆ ಕನ್ನಡ ಪ್ರೇಕ್ಷಕರು ಮತ್ತು ಇಡೀ ಟೀಂನ ಶ್ರಮವಿದೆ ಎನ್ನುತ್ತಾರೆ ನಿರ್ಮಾಪಕಿ.
ಉತ್ತಮ ಚಿತ್ರಗಳನ್ನು ಮಾಡಿದರೆ ಜನ ಖಂಡಿತ ಥಿಯೇಟರ್‌ಗೆ ಬರುತ್ತಾರೆ ಎಂಬುದಕ್ಕೆ ಈ ಗೆಲುವು ಇನ್ನೊಂದು ಉದಾಹರಣೆ. ಮಫ್ತಿ ೨ ಸಿನಿಮಾ ಮಾಡಿ ಅನ್ನೋದು ಅಭಿಮಾನಿಗಳ ಬಯಕೆ. ಖಂಡಿತ ಆ ಕಥೆಯ ಮುಂದುವರಿಕೆ ಬರುತ್ತದೆ. ಟೈಟಲ್ ಬೇರೆ ಇರಬಹುದಷ್ಟೇ…’ ಎಂದರು ಶಿವರಾಜ್‌ಕುಮಾರ್.
ನಿರ್ದೇಶಕ ನರ್ತನ್ ಶಿವಣ್ಣನ ಎರಡು ಸಿನಿಮಾ ಮಾಡುವ ಅವಕಾಶ ಲಭ್ಯವಾಗಿದ್ದು ನನ್ನ ಅದೃಷ್ಟ ಎಂದರು. ರಣಗಲ್ ಸಿನಿಮಾದ ಸಕ್ಸಸ್‌ಮೀಟ್‌ನಲ್ಲಿ ಬಹುತೇಕ ಚಿತ್ರತಂಡದ ಸದಸ್ಯರು ಹಾಜರಿದ್ದು, ತಮ್ಮ ಖುಷಿ ಹಂಚಿಕೊಂಡರು .