ಬೆಂಗಳೂರು : ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಒದಗಿಸುವ ಸೇವಾ ಶುಲ್ಕದ ದರವನ್ನು ಹೆಚ್ಚಳ ಮಾಡಲಾಗಿದ್ದು, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಸೇವಾ ಶುಲ್ಕದ ದರ ಶೇ. 10ರಿಂದ 20 ರಷ್ಟು ಹೆಚ್ಚಳಮಾಡಲಾಗಿದೆ. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆ ಹೊರ ರೋಗಿಗಳ ವಿಭಾಗದ ಮುಂದೆ ದರ ಏರಿಕೆ ಮಾಡಿರುವ ಕುರಿತಂತೆ ನೋಟಿಸ್ ಪ್ರಕಟಿಸಲಾಗಿತ್ತು. ಆದರೆ, ಇದು ಕೇವಲ ಒಂದು ಆಸ್ಪತ್ರೆಗೆ ಮಾತ್ರ ಸೀಮಿತವಾಗದೆ ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ ಮಾಡಲಾಗಿದೆ.
ರಾಜ್ಯದ ಅತಿದೊಡ್ಡ ಆಸ್ಪತ್ರೆ ಎಂದು ಹೆಸರಾಗಿರುವ ವಿಕ್ಟೋರಿಯಾ ಆಸ್ಪತ್ರೆ ಆಡಳಿತ ಮಂಡಳಿ ಒಮ್ಮೆಲೆ ದರ ಏರಿಕೆ ಮಾಡಿರುವುದನ್ನು ಕಂಡು ರೋಗಿಗಳು ಅಸಮಾಧಾನ ಹೊರಹಾಕಿದ್ದರು. ದರ ಏರಿಕೆ ಮಾಡುವ ಮುನ್ನ ಜನರಿಗೆ ತಿಳಿಸುವ ಕಾರ್ಯ ಮಾಡಬೇಕಾಗಿತ್ತು. ಆದರೆ, ಒಮ್ಮೆಲೆ ದರ ಏರಿಕೆ ಮಾಡಿದಲ್ಲಿ ಏನು ಮಾಡಬೇಕು ಎಂಬುದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಇದು ಕೇವಲ ಒಂದು ಆಸ್ಪತ್ರೆಗೆ ಸೀಮಿತವಾಗಿಲ್ಲ. ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ದರವನ್ನು ನಿಗದಿ ಮಾಡಲಾಗಿದೆ.