ಹೇಗ್ : ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ಈಗ ಇಸ್ರೇಲ್ ಪ್ರಧಾನಿ, ರಕ್ಷಣಾ ಸಚಿವ ಹಾಗೂ ಹಮಾಸ್ ಉಗ್ರಗಾಮಿ ಸಂಘಟನೆಯ ಮಿಲಿಟರಿ ಕಮಾಂಡರ್‌ಗೆ ಬಂಧನ ವಾರೆಂಟ್ ಹೊರಡಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರಿಗಲ್ಲದೆ, ಕಳೆದ ಜುಲೈನಲ್ಲಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮಿಲಿಟರಿ ದಾಳಿಯಲ್ಲಿ ಹತನಾದ ಹಮಾಸ್ ಮಿಲಿಟರಿ ಕಮಾಂಡರ್ ಮೊಹಮ್ಮದ್ ಡೀಫ್ ಹೆಸರಲ್ಲಿಯೂ ವಾರೆಂಟ್ ಹೊರಡಿಸಿರುವುದು ಅಚ್ಚರಿ ಮೂಡಿಸಿದೆ. ಈ ಮೂವರು ಆರೋಪಿಗಳು ಇಸ್ರೇಲ್ ಮತ್ತು ಹಮಾಸ್ ನಡುವಣ ಸಂಘರ್ಷದ ಸಮಯದಲ್ಲಿ ಮಾನವೀಯತೆ ವಿರುದ್ಧ ಅಪರಾಧ ಹಾಗೂ ಯುದ್ಧಾಪರಾಧದಲ್ಲಿ ತೊಡಗಿರುವುದಕ್ಕಾಗಿ ಕ್ರಿಮಿನಲ್ ಹೊಣೆಗಾರಿಕೆ ವಹಿಸಿಕೊಳ್ಳುವಂತೆ
ಮಾಡಲು ಹಲವಾರು ಕಾರಣಗಳಿವೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಗಾಜಾ ವಿರುದ್ಧದ ತನ್ನ ಕಾದಾಟವನ್ನು ಈ ಕ್ರಿಮಿನಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವುದಕ್ಕೆ ಇಸ್ರೇಲ್ ಈಗಾಗಲೇ ತಕರಾರು ತೆಗೆದಿದೆ. ಆದರೂ ಪ್ರಕರಣದ ವಿಚಾರಣಾ ಪೂರ್ವ ಕಲಾಪ ವೇಳೆ ಇಸ್ರೇಲ್ ಸವಾಲನ್ನು ತಿರಸ್ಕರಿಸಲಾಗಿದೆ.