ಕೋಲಾರ : 16 ವರ್ಷದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ಶಿಕ್ಷಕ ಮತ್ತು ಗುಮಾಸ್ತನಿಂದ ಥಳಿಸಿದ ಕಾರಣಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಉದಯ್ ಕುಮಾರ್ ತಾಲೂಕಿನ ಮುಷ್ಟೂರು ಗ್ರಾಮದ ನಿವಾಸಿಯಾಗಿದ್ದು, ತಾತಿಕಲ್ಲು ಬಳಿಯ ಆದರ್ಶ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ.
ಸೋಮವಾರ ಶಾಲೆಯಲ್ಲಿ ಥಳಿಸಲಾಗಿದೆ ಎಂದು ಬಾಲಕನ ಪೋಷಕರು ಹೇಳಿದ್ದಾರೆ. ಖಿನ್ನತೆಗೆ ಒಳಗಾದ ಉದಯ್ ಕುಮಾರ್ ಎನ್ ವಡ್ಡಹಳ್ಳಿಗೆ ತೆರಳಿ ಅಲ್ಲಿ ಗೊಬ್ಬರದ ಅಂಗಡಿಯಿಂದ ಇಲಿ ವಿಷವನ್ನು ಖರೀದಿಸಿದ್ದಾರೆ.
ತಂಪು ಪಾನೀಯದಲ್ಲಿ ವಿಷ ಬೆರೆಸಿ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಗೆ ಬಂದ ಉದಯ್ ಕುಮಾರ್ ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದು, ಪೋಷಕರು ಆತನನ್ನು ಮುಳಬಾಗಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ನಂಗಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.