ಕಡಬ ; ಸೌದಿ ಅರೇಬಿಯಾದ ಜೈಲಿನಲ್ಲಿ ಬ್ಯಾಂಕ್ ಖಾತೆ ಹ್ಯಾಕರ್‌ಗಳ ವಂಚನೆ ಪ್ರಕರಣಕ್ಕೆ ಒಳಗಾಗಿ ಕಳೆದ 11 ತಿಂಗಳಿನಿಂದ ಬಂಧಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್ ಕೊನೆಗೂ ಬಂಧಮುಕ್ತರಾಗಿ ಇಂದು ಕಡಬಕ್ಕೆ ಆಗಮಿಸಲಿದ್ದಾರೆ.
ಸೌದಿಯ ರಿಯಾದ್‌ನಿಂದ ಅಲ್ಲಿನ ಪೊಲೀಸರು ಚಂದ್ರಶೇಖರ್ ಅವರನ್ನು ಇಂದು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅಲ್ಲಿಂದ ಅವರು ಬಹುತೇಕ ಸಂಜೆ ವೇಳೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ದಿವಂಗತ ಕೆಂಚಪ್ಪ ಗೌಡ ಹಾಗೂ ಹೇಮಾವತಿ ದಂಪತಿಗಳಿಗೆ ಚಂದ್ರಶೇಖರ್ ಕೊನೆಯ ಪುತ್ರ.
ಸೌದಿ ಅರೇಬಿಯಾಕ್ಕೆ ಚಂದ್ರಶೇಖರ್ ಅವರು 2022ರಲ್ಲಿ ತೆರಳಿದ್ದರು. ಅಲ್ಲಿ ಅಲ್ಪಾನರ್ ಸೆರಾಮಿಕ್ಸ್ ಎಂಬ ಕಂಪೆನಿಯಲ್ಲಿ ಕೆಲಸದಲ್ಲಿದ್ದರು. 2022ರ ನವೆಂಬರ್‌ನಲ್ಲಿ ಅವರು ಮೊಬೈಲ್ ಮತ್ತು ಸಿಮ್ ಖರೀದಿಗೆ ರಿಯಾದ್‌ನ ಅಂಗಡಿಗೆ ಭೇಟಿ ನೀಡಿ,ಅಲ್ಲಿ ಅರ್ಜಿಯೊಂದಕ್ಕೆ ಎರಡು ಬಾರಿ ಸಹಿ ಮತ್ತು ಬೆರಳಚ್ಚು ಸಹಿ ನೀಡಿದ್ದರು. ನಂತರದಲ್ಲಿ ಅವರಿಗೆ ಒಂದು ವಾರಗಳ ನಂತರ ಅರೇಬಿಕ್ ಭಾಷೆಯಲ್ಲಿ ಅವರ ಹೊಸ ದೂರವಾಣಿ ಸಂಖ್ಯೆಗೆ ಸಂದೇಶವೊಂದು ಬಂದಿತ್ತು. ಚಂದ್ರಶೇಖರ್ ಅವರು ಅದನ್ನು ತೆರೆದು ನೋಡಿದ್ದರು.ನಂತರ ಎರಡು ದಿನಗಳ ಬಳಿಕ ದೂರವಾಣಿ ಕರೆಯೊಂದು ಬಂದು ಹೊಸ ಸಿಮ್ ಕಾರ್ಡ್ ಬಗ್ಗೆ ಮಾಹಿತಿ ಕೇಳಲಾಗಿತ್ತು.ಈ ಸಮಯದಲ್ಲಿ ಬಂದ ಒಟಿಪಿಯನ್ನು ಅವರು ಕರೆ ಮಾಡಿದ ವ್ಯಕ್ತಿಗೆ ತಿಳಿಸಿದ್ದರು.
ನಂತರದಲ್ಲಿ ಒಂದು ವಾರಗಳ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್ ಅವರನ್ನು ಬಂಧಿಸಿದ್ದರು. ಚಂದ್ರಶೇಖರ್‌ಗೆ ತಿಳಿಯದಂತೆ ಅಲ್ಲಿನ ಬ್ಯಾಂಕೊಂದರಲ್ಲಿ ಚಂದ್ರಶೇಖರ್ ಅವರ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆ ತೆರೆದು,ಈ ಖಾತೆಗೆ ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್ ಜಮೆ ಮಾಡಲಾಗಿತ್ತು.ಮಾತ್ರವಲ್ಲದೆ ಈ ಹಣವು ಆ ಖಾತೆಯಿಂದ ಬೇರೆ ಯಾವುದೋ ದೇಶದ ಒಂದು ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿತ್ತು. ಈ ಕಾರಣದಿಂದ ಹಣ ಕಳೆದುಕೊಂಡ ಮಹಿಳೆಯು ಚಂದ್ರಶೇಖರ್ ಅವರ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಸೌದಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ವಂಚನೆ ಆರೋಪದಡಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದರು.
ಚಂದ್ರಶೇಖರ್ ಬಂಧನವಾದ ವಿಷಯವನ್ನು ಅವರ ಗೆಳೆಯರು ಕಡಬದಲ್ಲಿರುವ ಅವರ ಮನೆಯವರಿಗೆ ತಿಳಿಸಿದ್ದರು. ಜೈಲಿನಲ್ಲಿ ಇರುವ ವೇಳೆ ದಿನದಲ್ಲಿ ಕೇವಲ 2 ನಿಮಿಷ ಮಾತ್ರ ಚಂದ್ರಶೇಖರ್ ಅವರಿಗೆ ದೂರವಾಣಿ ಕರೆ ಮಾಡಲು ಅವಕಾಶ ನೀಡಲಾಗಿತ್ತು. ಈ ನಡುವೆ ಚಂದ್ರಶೇಖರ್ ಅವರ ಸ್ನೇಹಿತರು ಸುಮಾರು ಅದರಲ್ಲಿ 10 ಲಕ್ಷ ರೂಪಾಯಿ ಹಣ ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದರು.
ವಂಚನೆಗೊಳಗಾಗಿ ಹಣ ಕಳೆದುಕೊಂಡ ಮಹಿಳೆಗೆ ಸುಮಾರು 6 ಲಕ್ಷ ರೂಪಾಯಿ ಹಣವನ್ನು ಪಾವತಿಸಲಾಗಿತ್ತು. ಆದರೂ ಬಿಡುಗಡೆ ಮಾತ್ರ ಸಾಧ್ಯವಾಗಿರಲಿಲ್ಲ. ಮಾಧ್ಯಮ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಅವರು ಇದ್ದ ಅಲ್ಲಿನ ಕಂಪನಿ ಮತ್ತು ಉಡುಪಿ ಮೂಲದ ಪ್ರಸ್ತುತ ಸೌದಿಯಲ್ಲಿರುವ ಪ್ರಕಾಶ್, ಅರುಣ್,ಕಬೀರ್ ಹಾಗೂ ಚಂದ್ರಶೇಖರ್ ಅವರ ಗೆಳೆಯರೂ ಅವರ ಬಿಡುಗಡೆಗೆ ನಿರಂತರ ಪ್ರಯತ್ನ ಮಾಡುತ್ತಿದ್ದರು.ಆದರೆ ಸರ್ಕಾರದ ವತಿಯಿಂದ ಸೌದಿಗೆ ಒಂದು ಪತ್ರ ಬರೆದದ್ದು ಬಿಟ್ಟರೆ ತಮಗೆ ಯಾವುದೇ ಸಹಕಾರ, ಬೆಂಬಲ ಲಭ್ಯವಾಗಿಲ್ಲ ಎನ್ನುತ್ತಾರೆ ಚಂದ್ರಶೇಖರ್ ಅವರ ಕುಟುಂಬಸ್ಥರು.
ಚಂದ್ರಶೇಖರ್ ಅವರಿಗೆ ಕಳೆದ ಜನವರಿಯಲ್ಲಿ ಊರಿನಲ್ಲಿ ಮದುವೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಮದುವೆಯ ದಿನಾಂಕವೂ ಅಂತಿಮವಾಗಿತ್ತು. ಆ ಸಿದ್ಧತೆಯಲ್ಲಿರುವಾಗಲೇ ಸೌದಿಯಲ್ಲಿ ಅವರ ಬಂಧನವಾಗಿತ್ತು.


