ಬೆಂಗಳೂರು : ದೀಪಾವಳಿ ಹಬ್ಬದಂದು ವಾಹನ ಸವಾರರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಹಿಸುದ್ದಿ ನೀಡಿದ್ದಾರೆ. ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಹೆಚ್ಚಿನ ಭದ್ರತೆಯ ನೋಂದಣಿ ಫಲಕಗಳನ್ನು ಅಳವಡಿಸಿಕೊಳ್ಳಲು ನವೆಂಬರ್ 17 ಕೊನೆಯ ದಿನಾಂಕವಾಗಿದ್ದು, ಅದನ್ನು ಈಗ ಫೆಬ್ರವರಿ 17, 2024 ರವರೆಗೆ ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಈ ನಿರ್ಧಾರದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫೆ.17ರವರೆಗೆ ಅವಧಿ ವಿಸ್ತರಿಸಲು ಚಿಂತನೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಅಧಿಕೃತ ಗೆಜೆಟ್ ಅಧಿಸೂಚನೆ ಬರಲಿದೆ. ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಸುಮಾರು ಎರಡು ಕೋಟಿ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅಳವಡಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ನವೆಂಬರ್ 17ರ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನಗಳಿಗೆ ದಂಡ ವಿಧಿಸಲಾಗುವುದು ಎಂದೂ ಹೇಳಲಾಗಿದೆ. ಇದೀಗ ಅವಧಿ ವಿಸ್ತರಿಸಿರುವುದರಿಂದ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಆಗಸ್ಟ್ 17 ರಂದು, ರಾಜ್ಯ ಸರ್ಕಾರವು ಮೂಲ ಉಪಕರಣ ತಯಾರಕರ (OEMs) ಅಧಿಕೃತ ಡೀಲರ್‌ಗಳಿಂದ ಪ್ರತ್ಯೇಕವಾಗಿ HSRP ಅನುಷ್ಠಾನವನ್ನು ಕಡ್ಡಾಯಗೊಳಿಸುವ ಅಧಿಸೂಚನೆಯನ್ನು ಹೊರಡಿಸಿತು.
ಹೊಸ ನಂಬರ್ ಪ್ಲೇಟ್ ಗಾಗಿ ಸಾರ್ವಜನಿಕರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಹಣ ಪಾವತಿಸಬೇಕಾಗಿದ್ದು, ಗ್ರಾಮೀಣ ಭಾಗದ ವಾಹನ ಸವಾರರು ಪರದಾಡುವಂತಾಗಿದೆ. ರಾಜ್ಯಾದ್ಯಂತ ಸುಮಾರು ಎರಡು ಕೋಟಿ ವಾಹನ ಮಾಲೀಕರು ಹೊಸ ನಂಬರ್ ಪ್ಲೇಟ್ ಪಡೆಯಬೇಕಿದೆ.