ಮಂಗಳೂರು : ಅಕ್ರಮ ಮರಳು ದಂಧೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ 40 ಲಕ್ಷ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.
ನದಿ ದಡದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಮೂಲ್ಕಿ, ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಡಿವೈಎಸ್ಪಿಗಳಾದ ಕಲಾವತಿ, ಚೆಲುವರಾಜು ಬಿ, ಇನ್ಸ್ ಪೆಕ್ಟರ್ ಅಮಾನುಲ್ಲಾ ನೇತೃತ್ವದಲ್ಲಿ ಮೂರು ತಂಡಗಳು ದಾಳಿ ನಡೆಸಿವೆ ಎಂದು ಲೋಕಾಯುಕ್ತ ಮಂಗಳೂರು ಎಸ್ಪಿ ಲಕ್ಷ್ಮೀ ಗಣೇಶ್ ತಿಳಿಸಿದ್ದಾರೆ.
40 ಲಕ್ಷ ಮೌಲ್ಯದ ಲಾರಿ, ಟಿಪ್ಪರ್ ಲಾರಿ, ಮಣ್ಣು ತೆಗೆಯುವ ಯಂತ್ರ, ಮರಳು ಸೇರಿದಂತೆ ಇತರೆ ಸೊತ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಬೇರೆ ಕಡೆಗಳಲ್ಲೂ ಅಕ್ರಮ ಮರಳು ತೆಗೆಯುತ್ತಿರುವ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದರು. ಅಕ್ರಮ ಮರಳು ದಂಧೆಯಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು