ಯಲ್ಲಾಪುರ : ಕನ್ನಡದ ನಾಡು, ನುಡಿ, ನೆಲ, ಜಲ ಇದೆಲ್ಲವೂ ನಮ್ಮೆಲ್ಲರ ಆಸ್ತಿ. ಇದರ ಕುರಿತಾದ ಭಿನ್ನಾಭಿಪ್ರಾಯ ಈ ಕನ್ನಡ ನಾಡಿನಲ್ಲಿ ಹುಟ್ಟಿದ ಯಾರಲ್ಲಿಯೂ ಇಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಬುಧವಾರ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕಾ ಆಡಳಿತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದ ಶುಭ ಸಂದರ್ಭದಲ್ಲಿ ನಾವಿದ್ದೇವೆ. ನಾವೆಲ್ಲ ಕನ್ನಡ ಭಾಷೆಯನ್ನು, ಕನ್ನಡದ ನೆಲವನ್ನು ಅತ್ಯಂತ ಶ್ರದ್ಧೆಯಿಂದ ಪ್ರೀತಿಸಬೇಕು. ಇತರ ಭಾಷೆಗಳು ನಮಗೆ ಜೀವನ ನಡೆಸಲು ಅತ್ಯವಶ್ಯಕ. ಅವುಗಳನ್ನು ಕಲಿಯುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಮ್ಮ ಮಾತ್ರ ಭಾಷೆ, ನಮ್ಮ ಹಿರಿಮೆಯನ್ನು ಹೆಚ್ಚಿಸಿರುವಂತಹ ಕನ್ನಡಕ್ಕೆ ನಮ್ಮ ಜೀವನದ ಅಂತಿಮ ಕ್ಷಣದವರೆಗೆ ಗೌರವನ್ನು ನೀಡಬೇಕು ಎಂದರು.
ರಾಜ್ಯ ಸರ್ಕಾರದ ಆದೇಶದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಕನ್ನಡದ ಗರಿಮೆಯನ್ನು ಹೆಚ್ಚಿಸುವ ಹಾಡುಗಳನ್ನು ಹಾಡಿದರು. ಶಾಸಕ ಶಿವರಾಮ ಹೆಬ್ಬಾರ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು, ಕನ್ನಡ ನಾಡಿನ ವೀರರ ವೇಷಭೂಷಣವನ್ನು ತೊಟ್ಟು ಸ್ಥಬ್ದಚಿತ್ರಗಳಲ್ಲಿ ಭಾಗವಹಿಸಿದ್ದರು. ಕನ್ನಡ ಪರ ಘೋಷಣೆಗಳನ್ನು ಕೂಗುತ್ತ ಭಾಗವಹಿಸಿದ್ದ ನೂರಾರು ಜನ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದರು. ನಂತರ ಪಟ್ಟಣದ ಗಾಂಧೀ ಕುಟೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುರಾಜ್ ಎಂ., ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಪ.ಪಂ. ಮುಖ್ಯಾಧಿಕಾರಿ ಸುನಿಲ ಗಾವಡೆ, ಪಂ.ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ಸಿಪಿಐ ರಂಗನಾಥ ನೀಲಮ್ಮನವರ, ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಪ್ರಮುಖರಾದ ಎಂ. ಆರ್. ಹೆಗಡೆ ಕುಂಬ್ರಿಗುಡ್ಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.


