ಬೆಳಗಾವಿ: ಸಿದ್ದರಾಮಯ್ಯ ಬದಲು ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದರೆ ಅದರ ಕಥೆನೇ ಬೇರೆ ಇತ್ತು ಎನ್ನುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿ ಆಪರೇಷನ್ ಕಮಲ ಆಗಲ್ಲ. ಆದರೆ ಮಹಾರಾಷ್ಟದ ಮಾದರಿಯಲ್ಲಿ ಸರ್ಕಾರ ಪತನ ಆದರೂ ಆಗಬಹುದು ಎಂದು ಭವಿಷ್ಯ ನುಡಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಿಸುತ್ತಿದೆ. ಕಾಂಗ್ರೆಸ್ ಶಾಸಕರಿಗೆ ೧೦೦ ಕೋಟಿ ರೂಪಾಯಿ ಆಫರ್ ನೀಡಲಾಗುತ್ತಿದೆ ಎನ್ನುವ ಮೂಲಕ ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದರು. ೨೦೧೯ರಲ್ಲಿ ಡಿಕೆಶಿಯವರ ಸೊಕ್ಕು, ದುರಾಡಳಿತದಿಂದ ಆಗಿನ ಸಮ್ಮಿಶ್ರ ಸರ್ಕಾರ ಪತನ ಮಾಡಿದ್ದೆವು. ಆದರೆ ಈಗ ಆಪರೇಷನ್ ಕಮಲ ನಡೆಯುತ್ತಿಲ್ಲ, ಅದು ಎಲ್ಲವೂ ಸುಳ್ಳು ಎಂದರಲ್ಲದೇ ಡಿಕೆಶಿ ಅವರಿಂದಲೇ ಕಾಂಗ್ರೆಸ್ ಸರ್ಕಾರ ಪತನವಾದರೂ ಅಚ್ಚರಿಪಡಬೇಕಿಲ್ಲ ಎಂದರು.
ಅನಿವಾರ್ಯದ ಮಾತು: ನನಗೆ ಅನಿಸಿದ ಪ್ರಕಾರ ಹಿಂದಿನ ಸಿದ್ದರಾಮಯ್ಯ ಈಗ ಇಲ್ಲ. ೬ ತಿಂಗಳು ಏನೂ ಮಾತಾಡಲ್ಲ ಎಂದು ಸಂಕಲ್ಪ ಮಾಡಿದ್ದೆ. ಆದರೆ ನಮ್ಮ ಪಕ್ಷದ ಹೆಸರು ಕೆಡಿಸುತ್ತಿರುವುದರಿಂದ ಅನಿವಾರ್ಯವಾಗಿ ಮಾತನಾಡಬೇಕಾಗಿದೆ.
ಸಮ್ಮಿಶ್ರ ಸರ್ಕಾರ ಸಂದರ್ಭದಲ್ಲಿ ಅಜ್ಮೀರ್ ಪ್ರವಾಸದಿಂದ ಇದು ಆರಂಭವಾಯಿತು. ಅಧಿಕಾರಕ್ಕೆ ಬಂದಾಗ ಮತ್ತು ಇಲ್ಲದಾಗ ಡಿಕೆ ಬೇರೆ ಬೇರೆ ರೀತಿ ಇರುತ್ತಾರೆ. ಬೆಳಗಾವಿ ರಾಜಕಾರಣದಿಂದಲೇ ಸರ್ಕಾರ ಪತನವಾಗಲಿದೆ ಎಂದರು.


