ಬೆಳ್ತಂಗಡಿ : ಕಳೆಂಜದ ಅಮ್ಮಿನಡ್ಕದಲ್ಲಿ ಶತಮಾನದಿಂದ ವಾಸವಾಗಿದ್ದ ಕುಟುಂಬವೊಂದು ಹಾಕಿದ್ದ ಅಡಿಪಾಯವನ್ನು ಅರಣ್ಯಾಧಿಕಾರಿಗಳು ನೆಲಸಮಗೊಳಿಸಿದ್ದು ಮಾತ್ರವಲ್ಲದೆ ಕುಟುಂಬದವರ ವಿರುದ್ಧ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದಾರೆ. 7ರಂದು ಮನೆಯೊಂದರ ಬುನಾದಿ ನೆಲಸಮ ಮಾಡಿದ್ದಕ್ಕೆ ಶಾಸಕ ಹರೀಶ್ ಪೂಂಜಾ ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದ್ದು, ಬಳಿಕ ಸ್ಥಳೀಯ ಯುವಕರ ಸಹಕಾರದಿಂದ ತಾತ್ಕಾಲಿಕ ಮನೆ ನಿರ್ಮಿಸಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೂ ವಿಷಯ ತಿಳಿಸಿದ್ದಾರೆ. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ, ಕುಟುಂಬದ ಮುಖ್ಯಸ್ಥರಾದ ಲೋಲಾಕ್ಷ, ಹರೀಶ್ ಕೊಯಿಲ, ಪ್ರಸನ್ನ ಮಣಿಗೇರಿ, ಯಶವಂತ ಗೌಡ, ನೋಣಯ್ಯ ಗೌಡ, ಜನಾರ್ದನ ಗೌಡ ಕುಡ್ಡ, ಪದ್ಮನಾಭ ಗೌಡ ಕುಡ್ಡ, ಧನಂಜಯ ಗೌಡ ಬಂಡೇರಿ, ರಾಮಚಂದ್ರ ಮೇಸ್ತ್ರಿ, ಶ್ರೀನಿವಾಸಗೌಡ ಕುಡ್ಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಉದಯಗೌಡ ಕುಡ್ಡ ಮತ್ತಿತರರಿದ್ದರು. ದೂರಿನಲ್ಲಿ ಉಲ್ಲೇಖಿಸಲಾದ 10 ಆರೋಪಿಗಳು ಮತ್ತು ಇತರರು ಹಮ್ಮಿನಡ್ಕದಲ್ಲಿ ಮೀಸಲು ಅರಣ್ಯದ ವಿಸ್ತೃತ ಬ್ಲಾಕ್ 2 ರಲ್ಲಿ ಅರಣ್ಯಾಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಮತ್ತು ಅರಣ್ಯ ಭೂಮಿಯಲ್ಲಿ ಅನಧಿಕೃತ ಕಟ್ಟಡ ನಿರ್ಮಿಸಲು ಲೋಲಾಕ್ಷ ಅಲಿಯಾಸ್ ಅನಂತುಗೆ ಬೆಂಬಲ ನೀಡಿದ್ದಾರೆ ಎಂದು ಅರಣ್ಯಾಧಿಕಾರಿ ದೂರಿನಲ್ಲಿ ಆರೋಪಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಕೃಷಿ ಚಟುವಟಿಕೆಯೊಂದಿಗೆ ಸದರಿ ಭೂಮಿಯಲ್ಲಿ ವಾಸಿಸುತ್ತಿರುವ ಕುಟುಂಬವನ್ನು ಮುನ್ಸೂಚನೆಯೂ ನೀಡದೆ ದಬ್ಬಾಳಿಕೆಯೊಂದಿಗೆ ಒಕ್ಕಲೆಬ್ಬಿಸಲು ಸಂಚು ರೂಪಿಸಿರುವ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವಿರುದ್ಧ ಜನರು ಈಗಾಗಲೇ ರೊಚ್ಚಿಗೆದ್ದಿದ್ದಾರೆ. ಬಡವರೊಂದಿಗೆ ಸರ್ಕಾರ ಒರಟು ರೀತಿಯಲ್ಲಿ ನಡೆದುಕೊಂಡದ್ದೇ ಆದಲ್ಲಿ ಜನರ ಪ್ರತಿಕ್ರಿಯೆಯು ಯಾವ ರೂಪದಲ್ಲಿ ಇರಬಹುದು ಎಂಬುದು ಊಹಿಸಲಸಾಧ್ಯ. ಮುಂದಿನ ಎಲ್ಲಾ ಆಗುಹೋಗುಗಳಿಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ಶಾಸಕ ಹರೀಶ್ ಪೂಂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕ ಹಾಗೂ ಸಚಿವರ ಮಾತಿಗೆ ಮನ್ನಣೆ ನೀಡದ ವೃದ್ಧ ಅಂಧ ಲೋಲಾಕ್ಷ ಅವರ ಮೇಲೂ ದೂರು ದಾಖಲಿಸಿರುವ ಅರಣ್ಯಾಧಿಕಾರಿಯ ದುರಹಂಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.