ಬೆಳಗಾವಿ : ರಾಜ್ಯದಲ್ಲಿ ಬಿಜೆಪಿ ಸರಕಾರದ 4 ವರ್ಷದ ಅವಧಿಯಲ್ಲಿ ಸಚಿವರ ಪ್ರಯಾಣದ ವೆಚ್ಚ ಬರೋಬ್ಬರಿ ೧೫ ಕೋಟಿ ೭೨ ಲಕ್ಷ ರೂ. ಆಗಿದೆ. ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದುಕೊಂಡ ಮಾಹಿತಿಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಸಜ್ಜನ ಸ್ವಭಾವದ ಸಚಿವರೆಂದೇ ಖ್ಯಾತಿ ಪಡೆದಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು 4 ವರ್ಷಗಳಲ್ಲಿ 1 ಕೋಟಿ26 ಲಕ್ಷ 21 ಸಾವಿರದ 674 ರೂ. ಪ್ರಯಾಣ ಭತ್ಯೆ ಪಡೆದು ಪ್ರಥಮ ಸ್ಥಾನದಲ್ಲಿದ್ದಾರೆ. 2019-20ನೇ ಸಾಲಿನಿಂದ 2022-23 ನೇ ಸಾಲಿನವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರ ಪ್ರಯಾಣ ಭತ್ಯೆಯ ಸಲುವಾಗಿ ರಾಜ್ಯ ಖಜಾನೆಯಿಂದ 17 ಕೋಟಿ 26 ಲಕ್ಷ 71 ಸಾವಿರದ 674 ರೂ. ವೆಚ್ಚ ಮಾಡಲಾಗಿದೆ.
ಪಶು ಸಂಗೋಪನಾ ಸಚಿವರಾಗಿದ್ದ ಪ್ರಭು ಚವ್ಹಾಣ ಅವರು 99,15,442 ರೂ. ಪ್ರಯಾಣ ಭತ್ಯೆ ಪಡೆದು ಎರಡನೆಯ ಸ್ಥಾನದಲ್ಲಿದ್ದರೆ, ಕೇವಲ 1,44,110 ರೂ. ಪ್ರಯಾಣ ಭತ್ಯೆ ಪಡೆದಿರುವ ಸಿ.ಪಿ. ಯೋಗೇಶ್ವರ ಅವರು ಇತರ ಸಚಿವರೆಲ್ಲರಿಗೂ ಮಾದರಿಯಾಗಿದ್ದಾರೆ. ಐಷಾರಾಮಿ ಹವಾನಿಯಂತ್ರಿತ ಫಾರ್ಚುನರ್, ಇನೋವಾ ಮುಂತಾದ ವಾಹನಗಳು ಮಾರುಕಟ್ಟೆಯಲ್ಲಿ ಪ್ರತಿ ಕಿಲೋಮೀಟರ್‌ಗೆ 18 ರಿಂದ20 ರೂ. ದರದಲ್ಲಿ ಬಾಡಿಗೆ ಸಿಗುತ್ತವೆ. ಆದರೆ ಸರ್ಕಾರದ ಹಣದಲ್ಲಿಯೇ ಖರೀದಿಸಿ ಈ ವಾಹನಗಳನ್ನು ಸಚಿವರಿಗೆ ನೀಡಲಾಗುತ್ತಿದೆ ಹಾಗೂ ಈ ವಾಹನಗಳ ಚಾಲಕರ ವೇತನವನ್ನು ಕೂಡ ಸರ್ಕಾರವೇ ನೀಡುತ್ತದೆ.
ಹೀಗಿರುವಾಗ ಈ ಕಾರುಗಳಲ್ಲಿ ಪ್ರಯಾಣಿಸುವ ಸಚಿವರಿಗೆ ಪ್ರತಿ ಕಿಲೋ ಮೀಟರ್‌ಗೆ 40 ರೂ.ಗಳಂತೆ ಸರ್ಕಾರ ಪ್ರಯಾಣ ಭತ್ಯೆ ನೀಡುತ್ತಿರುವುದು ಎಷ್ಟು ಸಮಂಜಸ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇದರಂತೆಯೆ ಸಚಿವರ ಉಪಯೋಗಕ್ಕಾಗಿ ಸಹ ವಾಹನಗಳನ್ನು ಖಾಸಗಿ ಏಜೆನ್ಸಿಗಳ ಮೂಲಕ ಬಾಡಿಗೆ ಪಡೆದರೆ ವಾಹನಗಳ ಖರೀದಿಗೆ ಬೇಕಾಗುವ ಹಣ ಮತ್ತು ಚಾಲಕರಿಗೆ ಪ್ರತಿ ತಿಂಗಳು ನೀಡಬೇಕಾದ ವೇತನದ ಹಣ ಎರಡು ಕೂಡಾ ಸರ್ಕಾರಕ್ಕೆ ಉಳಿತಾಯವಾಗುತ್ತದೆ ಎಂಬ ಅಂಶ ಸರ್ಕಾರಕ್ಕೆ ಹೇಗೆ ಗೊತ್ತಾಗಲಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.


