ಮೈಸೂರು : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೇಟಿಕುಪ್ಪೆ ವನ್ಯಜೀವಿ ವ್ಯಾಪ್ತಿಯ ಕಲ್ಲಹಟ್ಟಿ ಗ್ರಾಮದಲ್ಲಿ ಸೋಮವಾರ ಹುಲಿ ದಾಳಿಗೆ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ವ್ಯಾಪ್ತಿಗೆ ಬರುವ ಗ್ರಾಮದ ಹೊಲದಲ್ಲಿ ಕೃಷ್ಣನಾಯ್ಕ ಎಂಬುವವರ ಪುತ್ರ ಚರಣ್ ನಾಯ್ಕ ಎಂಬ ಬಾಲಕನ ಮೇಲೆ ಹುಲಿ ದಾಳಿ ನಡೆಸಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರ ವರದಿಯ ಮೇರೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ವಾರ್ಡನ್ ಅವರು ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಹುಲಿಯನ್ನು ಹಿಡಿಯಲು ಅನುಮತಿ ನೀಡಿದ್ದಾರೆ.