ಶಿರಾ : ತಾಲ್ಲೂಕಿನ ಗಡಿ ಪ್ರದೇಶದಲ್ಲಿ ಕಳ್ಳಂಬೆಳ್ಖ ಹೋಬಳಿ ವ್ಯಾಪ್ತಿಯ ಬೆಂಚೆ. ಬಸವನಹಳ್ಳಿ ಯಡಿಗೆಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಕತ್ತೆಗಳ ಮದುವೆಯನ್ನು ಭಾರೀ ಅದ್ಧೂರಿಯಾಗಿ ಶಾಸ್ತ್ರೋಕ್ತವಾಗಿ ನಡೆಸಲಾಯಿತು. ಒಂದು ಕಡೆ ಸಿಂಗಾರಗೊಂಡ ಕತ್ತೆಗಳ ನಡುವೆ ಜನರ ಮೆರವಣಿಗೆ, ಇನ್ನೊಂದೆಡೆ ಭರ್ಜರಿಯಾಗಿ ತಯಾರಾಗ್ತಿರೋ ಭೋಜನ. ಊರಲ್ಲೆಲ್ಲ ಒಂದು ರೀತಿಯ ಜಾತ್ರೆಯ ಸಂಭ್ರಮ.ಮಕ್ಕಳು, ಮಹಿಳೆಯರಿಗಂತೂ ಸಂಭ್ರಮವೋ ಸಂಭ್ರಮ. ಹಾಗಂತ ಇದೇನು ಉತ್ಸವನೂ ಅಲ್ಲ, ಜಾತ್ರೆನೂ ಅಲ್ಲ ಬದಲಿಗೆ ಮಳೆ ಕರುಣಿಸುವಂತೆ ವರುಣ ದೇವನನ್ನು ಹಳ್ಳಿ ಜನರು ಮಾಡಿದ ವಿಶಿಷ್ಟ ಪ್ರಯತ್ನ.
ಹೌದು, ರಾಜ್ಯದಲ್ಲಿ ಸರಿಯಾದ ಮಳೆ ಬೀಳುತ್ತಿಲ್ಲ ಪ್ರತಿದಿನ ರೈತರು ಮಳೆಗಾಗಿ ಮೋಡ ಕವಿದ ವಾತಾವರಣ ನೋಡಿ ಮಳೆ ಬರುತ್ತದೆ ಎಂದು ಕಾದರು ಮಳೆ ಸುರಿದಿಲ್ಲ. ಹೀಗಾಗಿ ಮಳೆರಾಯನನ್ನ ಒಲಿಸಿಕೊಳ್ಳಲ್ಲಿ ಇಲ್ಲಿಯ ಜನರು ದೇವಸ್ಥಾನಗಳಲ್ಲಿ ಪೂಜೆ, ಜಲಾಭಿಷೇಕ, ಗೊಂಬೆಗಳ ಮದುವೆ ಮಾಡಿದ್ದೂ ಆಗಿದೆ.ಆದರೆ ಇದೀಗ ವರುಣನ ಕೃಪೆಗಾಗಿ ಗ್ರಾಮಸ್ಥರು ಅದ್ದೂರಿಯಾಗಿ ಕತ್ತೆಗಳ ಮದುವೆಯನ್ನ ಮಾಡಿ ಇಡೀ ಊರಿಗೆ ಊಟ ಬಡಿಸಿ ಗಮನ ಸೆಳೆದಿದ್ದಾರೆ.
ಈ ಮೂಲಕನಾದ್ರೂ ಮಳೆರಾಯ ಕರುಣೆ ತೋರುತ್ತಾನೆ ಅನ್ನೋದು ಈ ಹಳ್ಳಿ ಜನರ ನಂಬಿಕೆಯಾಗಿದೆ.
ಭಾರೀ ಸಂಭ್ರಮಗಂಡು ಹಾಗೂ ಹೆಣ್ಣು ಕತ್ತೆಯನ್ನ ತಂದು ಮದುಮಗನಂತೆ ಸಿಂಗರಿಸಿ, ಅವುಗಳಿಗೆ ಹೂವಿನ ಹಾರವನ್ನ ಕೊರಳಿಗೆ ಹಾಕಿ ಹಣೆಗೆ ಬಾಸಿಂಗ ಕಟ್ಟಿ ಗ್ರಾಮಸ್ಥರ ಸಮ್ಮುಖದಲ್ಲಿ ಮದುವೆ ಮಾಡಲಾಯಿತು.
ಬಾಜಾ ಭಜಂತ್ರಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮದುವೆಯಾದ ಕತ್ತೆಯ ಮೆರವಣಿಗೆಯೂ ನಡೆಯಿತು.
ಗ್ರಾಮದ ಪುರುಷರು ಮಹಿಳೆಯರು, ಮಕ್ಕಳು, ಹಿರಿಯರು ಹೀಗೆ ಎಲ್ಲರೂ ಸೇರಿಕೊಂಡು ಜನರೆಲ್ಲರೂ ಭಾಗವಹಿಸಿದ್ದು ಗಮನ ಸೆಳೆಯಿತು.ಶಾಸ್ತ್ರೋಕ್ತ ಮದುವೆ!ಹೆಣ್ಣು ಕತ್ತೆಯನ್ನು ವಧು, ಗಂಡು ಕತ್ತೆಯನ್ನು ವರನ ರೂಪದಲ್ಲಿ ಕಾಣಲಾಯ್ತು, ಜಾನಪದ ಹಾಡು ಹೇಳುತ್ತ, ಹೊಸ ಬಟ್ಟೆಗಳ ಕಾಣಿಕೆಯನ್ನು ನೀಡಿ ಎಲ್ಲ ಆಚರಣೆ ಮತ್ತು ಕಾರ್ಯಕ್ರಮಗಳನ್ನು ಸಂಪ್ರದಾಯಬದ್ಧವಾಗಿ ಮಾಡಿದರು.
ಪರಸ್ಪರ ಅರಿಶಿಣ ಹಚ್ಚಿಕೊಂಡು ಹಳದಿ ಅರಿಶಿಣ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು.
ಭರ್ಜರಿ ಭೋಜನಪ್ರತಿ ಮನೆಯಿಂದ ಕತ್ತೆಗಳಿಗೆ ನೀರು ಹಾಕಿ ಅರಶಿಣ ಕುಂಕುಮ ಹಚ್ಚಿ ಪೂಜೆಮಾಡಿ ಗ್ರಾಮದ ಸುಮಂಗಲಿಯರಿಂದ ಆರತಿ ಮಾಡಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಇನ್ನು ಕತ್ತೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗ್ರಾಮಸ್ಥರೆಲ್ಲರೂ ಭರ್ಜರಿ ಭೋಜನವನ್ನು ಸ್ವೀಕರಿಸಿದರು.
ಈ ಮೂಲಕ ವರುಣ ದೇವ ಒಲಿಯುತ್ತಾನೆ ಎಂದು ಜನ ಮೋಡ ಕವಿದ ಆಗಸ ನೋಡಿ ಸಂಭ್ರಮಪಟ್ಟರು.


