ಉಳ್ಳಾಲ : ಪಾಸ್ ಪೋರ್ಟ್ ರಿನಿವಲ್ ಮಾಡಿಸಲೆಂದು ಬೆಂಗಳೂರಿಂದ ಬಂದು ಮಂಗಳೂರಿನ ತೊಕ್ಕೊಟ್ಟಿನ ಲಾಡ್ಜಲ್ಲಿ ತಂಗಿದ್ದ ಯುವಕ ನಾಪತ್ತೆಯಾಗಿದ್ದು ಇಂದು ಆತನ ಮೃತದೇಹ ಲಾಡ್ಜ್ ಸಮೀಪದ ಮನೆಯೊಂದರ ಬಾವಿಯಲ್ಲಿ ಶಂಕಾಸ್ಪದವಾಗಿ ಪತ್ತೆಯಾಗಿದೆ.
ಮೂಲತ: ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಮಹಂತೇಶ್ ಎ.ಎಸ್ (36)ಮೃತ ಯುವಕ.ಎಮ್ .ಬಿ.ಎ ಪದವೀಧರನಾಗಿದ್ದ ಮಹಂತೇಶ್ ಬೆಂಗಳೂರಲ್ಲಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದನಂತೆ.ಈತ ಕಳೆದ ಬುಧವಾರ ಸಂಜೆ 5 ಗಂಟೆಗೆ ತೊಕ್ಕೊಟ್ಟು ಕಾಪಿಕಾಡುವಿನ ನಿರ್ವಿಕಲ್ಪ ಹೊಟೇಲ್ನ ಓಯೋ ಕಂಪನಿ ಲಾಡ್ಜಲ್ಲಿ ತಂಗಿದ್ದ.ಆ ದಿನ ರಾತ್ರಿ ಮಹಂತೇಶ್ ತೊಕ್ಕೊಟ್ಟಿನ ಮಾಯಾ ಬಾರಲ್ಲಿ ಮದ್ಯ ಸೇವಿಸಿ ಬಳಿಕ ಬಂದು ತಾನು ತಂಗಿದ್ದ ಲಾಡ್ಜ್ ನ ಬಾರಲ್ಲೂ ಮಧ್ಯರಾತ್ರಿವರೆಗೆ ಮದ್ಯ ಸೇವಿಸಿ ಮೊಬೈಲನ್ನ ಅಲ್ಲೆ ಬಿಟ್ಟು ಹೊರ ಹೋಗಿದ್ದನಂತೆ.
ಶುಕ್ರವಾರ ಸಂಜೆ ಲಾಡ್ಜ್ ಸಿಬ್ಬಂದಿಗಳು ರೂಮನ್ನ ತಪಾಸಣೆ ಮಾಡಿದಾಗ ಮಹಂತೇಶ್ ಇರುವಿಕೆ ಇಲ್ಲದನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಶನಿವಾರದಂದು ಮಹಂತೇಶ್ ನ ಸಹೋದರಿ ಉಳ್ಳಾಲ ಠಾಣೆಗೆ ಬಂದು ಮಹಂತೇಶ್ ಕಾಣೆಯಾದ ಬಗ್ಗೆ ದೂರು ನೀಡಿದ್ದರು.
ಇಂದು ಮದ್ಯಾಹ್ನದ ವೇಳೆ ಅಂಬಿಕಾರೋಡ್ ಹೆದ್ದಾರಿ ಅಂಚಿನಲ್ಲಿರುವ ಅಬ್ದುಲ್ ಸಮದ್ ಎಂಬವರ ಮನೆಯ ಹಿಂದಿನ ಬಾವಿಯಲ್ಲಿ ಮಹಂತೇಶ್ನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸ್ಥಳಕ್ಕೆ ಬಂದ ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಉಳ್ಳಾಲ ಪೊಲೀಸರು ಕೊಳೆತ ಶವವನ್ನು ಮೇಲಕ್ಕೆತ್ತಿದ್ದಾರೆ.
ಮೃತದೇಹದ ಪ್ಯಾಂಟ್ ಜೇಬಲ್ಲಿ ನಿರ್ವಿಕಲ್ಪ ಲಾಡ್ಜ್ನ ರೂಂ ಕೀಲಿ ಕೈ ಮತ್ತು ಮಹಂತೇಶ ಅರಸೀಕೆರೆ ಎಂದು ಸ್ಟಿಕ್ಕರ್ ಹಚ್ಚಿರುವ ಪೆನ್ ಡ್ರೈವ್ ಲಭಿಸಿದ್ದು ಪೊಲೀಸರು ಲಾಡ್ಜ್ ಸಿಬ್ಬಂದಿಯನ್ನ ಕರೆಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.ಮೃತದೇಹವನ್ನ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.
ಸಮದ್ ಅವರ ಮನೆಯು ಹೆದ್ದಾರಿ ಅಂಚಲ್ಲಿದ್ದು ಮನೆಗೆ ತಾಗಿಕೊಂಡು ವಾಣಿಜ್ಯ ಮಳಿಗೆಗಳಿವೆ.ಮನೆ ಹಿಂಬದಿಯಲ್ಲಿ ಬಾವಿ ಇದ್ದು ಅಲ್ಲಿ ಬಾಡಿಗೆ ಮನೆ ನಿವಾಸಿಗಳಿದ್ದಾರೆ.ಈ ಬಾವಿಗೆ ಮಹಂತೇಶ್ ಹೇಗೆ ಬಿದ್ದನೆಂಬುದೇ ಅನುಮಾನಗಳಿಗೆ ಕಾರಣವಾಗಿದೆ.ಬಾವಿಯಲ್ಲಿ ಶವ ಪತ್ತೆಯಾದಾಗಲೂ ಪಂಪ್ ಸೆಟ್ ಅಳವಡಿಸಲಾಗಿದ್ದ ಬಾವಿಗೆ ಸಂಪೂರ್ಣವಾಗಿ ಬಲೆಯನ್ನ ಮುಚ್ಚಲಾಗಿತ್ತು.ಪೊಲೀಸರ ತನಿಖೆಯಿಂದಷ್ಟೆ ಮಹಂತೇಶನ ಸಾವು ಹೇಗೆ ಸಂಭವಿಸಿದೆ ಎಂದು ತಿಳಿಯ ಬೇಕಿದೆ.


