ಸೊರಬ: ಕಾಂಗ್ರೆಸ್ ಪಕ್ಷದ ಆದೇಶ ಧಿಕ್ಕರಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಮೂವರು ಗ್ರಾಪಂ ಸದಸ್ಯರು ಮತ್ತು ಇಬ್ಬರು ಕಾರ್ಯಕರ್ತರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಪಕ್ಷದ ಜಿಲ್ಲಾಧ್ಯಕ್ಷರು ಉಚ್ಛಾಟನೆ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ ತಿಳಿಸಿದರು.
ತಾಲೂಕಿನ ಉಳವಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಳವಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ನಿಕಟಪೂರ್ವ ಅಧ್ಯಕ್ಷೆ ಎಸ್. ಪ್ರೇಮಾ ಅವರನ್ನು ಪುನಃ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಡಿ.ಜಿ. ಪ್ರಶಾಂತ್ ಅವರನ್ನು ಆಯ್ಕೆ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಅಂದು ನಡೆದ ಸಭೆಗೆ ಹಾಜರಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸದೇ ಪಕ್ಷದ ಸೂಚನೆಗಳಿಗೆ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದರು.
ಉಳವಿ ಗ್ರಾಪಂ ಸದಸ್ಯರಾದ ಪರಶುರಾಮ ಕೋಳಿಸಾಲು, ತನ್ವೀರ್ ಅಹಮದ್, ಕೆ.ಬಿ. ನಾಗರಾಜ ಕೈಸೋಡಿ, ಕಾನಲೆ ಗ್ರಾಪಂ ಸದಸ್ಯೆ ಜಾನಕಿ ರಾಮಕೃಷ್ಣ, ಕಾರ್ಯಕರ್ತೆ ರಾಮಕೃಷ್ಣ ಪಡವಗೋಡು ಅವರನ್ನು ಪಕ್ಷ ವಿರೋಧ ಚಟುವಟಿಕೆ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿಯ ಶಿಫಾರಸ್ಸಿನ ಅನ್ವಯ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಮಾತನಾಡಿ, ಪಕ್ಷದ ತೀರ್ಮಾನವನ್ನು ಉಲ್ಲಂಘಿಸುವಂತಹ ಘಟನೆಗಳು ತಾಲೂಕಿನಲ್ಲಿ ಮರುಕಳಿಸಬಾರದು ಎಂಬ ಉದ್ದೇಶದಿಂದ ಸಚಿವ ಎಸ್. ಮಧು ಬಂಗಾರಪ್ಪ ಅವರ ಗಮನಕ್ಕೆ ತಂದು ಶಿಸ್ತು ಕ್ರಮ ಜರುಗಿಸಲಾಗಿದೆ. ತಾಲೂಕಿನಲ್ಲಿ ಸುಮಾರು 25 ಗ್ರಾಪಂಗಳು ಕಾಂಗ್ರೆಸ್ ಬೆಂಬಲಿತರ ತೆಕ್ಕೆಗೆ ಬಂದಿದೆ. ಆದರೆ, ಉಳವಿ ಗ್ರಾಪಂನಲ್ಲಿ ಕೆಲ ಸದಸ್ಯರು ನಡೆಸಿದ ಪಕ್ಷ ವಿರೋಧಿ ಚಟುವಟಿಕೆಯನ್ನು ಪಕ್ಷ ಖಂಡಿಸುತ್ತದೆ. ಜೊತೆಗೆ ಅವರು ಕಾಂಗ್ರೆಸ್ ಬೆಂಬಲಿತರು ಎನ್ನುವ ಹೇಳಿಕೆ ಸಹ ಅವರ ವೈಯುಕ್ತಿಕ ಅಭಿಪ್ರಾಯವಾಗಿದ್ದು, ಪಕ್ಷಕ್ಕೆ ಸಂಬಂಧಿಸಿದಲ್ಲ. ಉಳವಿ ಗ್ರಾಪಂನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ. ಇಲ್ಲಿ ವಿರೋಧ ಪಕ್ಷವಾಗಿ ಪಕ್ಷದ ಸಂಘಟನೆ ಕೆಲಸ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ನಿಕಟಪೂರ್ವ ಅಧ್ಯಕ್ಷೆ ಪ್ರೇಮಾ, ಸದಸ್ಯ ಡಿ.ಜಿ. ಪ್ರಶಾಂತ್, ಪ್ರಮುಖರಾದ ಸುರೇಶ್ ಬಿಳವಾಣಿ, ಪ್ರಭಾಕರ ಶಿಗ್ಗಾ, ರವಿ ಬರಗಿ, ಪುಟ್ಟಪ್ಪ ಬರಗಿ, ಗಣಪತಿ ಮೈಸಾವಿ, ಜಯಪ್ರಕಾಶ್, ಶಿವಮೂರ್ತಿ, ಭೈರಪ್ಪ, ಚೌಡಪ್ಪ, ಮೋಹನ ಕುಪ್ಪೆ ಸೇರಿದಂತೆ ಇತರರಿದ್ದರು


